'ನೀವು ಫೈಲ್ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ' ಎಂದು ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಅವರು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಚೋಳ ಅವರ ಬಗ್ಗೆ ಆಡಿದ ಮಾತು ಸದನದಲ್ಲಿ ಕೆಲಕಾಲ ಗೊಂದಲ, ಮಾತಿನ ಚಕಮಕಿ, ಆರೋಪ,ಪ್ರತ್ಯಾರೋಪಗಳಿಗೆ ಕಾರಣವಾಯಿತು.
ಉಗ್ರಪ್ಪ ಅವರು ಆಡಿದ ಮಾತಿಗೆ ಸಿಟ್ಟಿಗೆದ್ದ ಕಾರಜೋಳ, ನಾನು ಓದಿಕೊಂಡೆ ಬಂದಿದ್ದೇನೆ, ನಿಮ್ಮಿಂದ ನಾನು ಅದನ್ನು ಕಲಿಯಬೇಕಿಲ್ಲ. ಹೀಗೆಲ್ಲ ಮಾತನಾಡುವುದಾದರೆ ಅದು ಪುಂಡಾಟಿಕೆಯಾಗುತ್ತದೆ ಎಂದು ತಿರುಗೇಟು ನೀಡಿದರು.
ಉಗ್ರಪ್ಪ ಅವರು ನೀವೇ ಪುಂಡಾಟಿಕೆ ನಡೆಸುತ್ತಿರುವುದು, ನಿಮಗೆ ಅಧಿಕಾರದ ಅಹಂ ಇದೆ ಎನ್ನುತ್ತಿದ್ದಂತೆ, ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿ.ಕರುಣಾಕರ ರೆಡ್ಡಿ, ಬಿ.ಎನ್.ಬಚ್ಚೇಗೌಡ ಅವರನ್ನು ಒಮ್ಮೆಲೆ ಕೆರಳಿಸಿತು.
ಅವರೆಲ್ಲ ಉಗ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಉಪಸಭಾಪತಿ ಪುಟ್ಟಣ್ಣ ಅವರು ಸದನದ ಸದಸ್ಯರ ಮನಸ್ಸನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ಕಾಂಗ್ರೆಸ್‌ನ ಮೋಟಮ್ಮ ಅವರು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಆಗಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆಯ ದಾರದಹಳ್ಳಿ ಗ್ರಾಮ ಪಂಚಾಯಿತಿ, ದಾರದಹಳ್ಳಿ ಕಾಲೋನಿ ಕೆಳಭಾಗದ ದೋಣಿಗರಡಿ ಸಮೀಪ ಕಾಲು ಸೇತುವೆ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ 5ಲಕ್ಷ ರೂಪಾಯಿ ಏನಾಯಿತು? ಎಂಬ ಪ್ರಶ್ನೆಗೆ ಸಚಿವರು ಸಮರ್ಪಕ ಉತ್ತರ ನೀಡದೆ ಇದ್ದುದೇ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. |