ಪೋಷಕರನ್ನು ಸುಲಿಗೆ ಮಾಡುತ್ತಿರುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಮೇಲೆ ನಿಯಂತ್ರಣ ಹೇರಲು ಅನುಕೂಲವಾಗುವಂತೆ ಸದ್ಯದಲ್ಲೇ ಹೊಸ ಕಾಯ್ದೆಯೊಂದನ್ನು ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿ ಬುಧವಾರ ಹೇಳಿದರು.
ಈ ಶಾಲೆಗಳು ತಮ್ಮದೇ ಆದ ಮಂಡಳಿಗಳ ವ್ಯಾಪ್ತಿಗೊಳಪಡುವುದರಿಂದ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲು ಸದ್ಯಕ್ಕೆ ಅವಕಾಶವಿಲ್ಲ. ಶಾಲೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಕಾಯ್ದೆಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಅವರು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಡೆರಿಕ್ ಎಂ.ಬಿ.ಫಾಲಿನ್ ಅವರ ಪರವಾಗಿ ಮತ್ತೊಬ್ಬ ಶಾಸಕ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಶಾಲೆಗಳು ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಗಮನ ಸೆಳೆಯಲಾಗಿದೆ ಎಂದರು.
ಇಂತಹ ಶಾಲೆಗಳ ಮೇಲೆ ನಿಗಾ ಇಟ್ಟಿದ್ದೇವೆ, ಕಡಿವಾಣ ಹಾಕಲು ಸಮಿತಿ ರಚಿಸಿದ್ದೇನೆ ಎಂಬ ಸಬೂಬು ಹೇಳಿ ಸರ್ಕಾರದ ಜಾಣ ಕಿವುಡು ಆಗಬಾರದು. ಕೇಂದ್ರಕ್ಕೆ ದೂರು ಕೊಟ್ಟಿದ್ದೇವೆ ಎಂದು ಸುಮ್ಮನಾಗಬಾರದು. ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಬಳಸಿಕೊಂಡು ಪಾಲಕರನ್ನು ಶೋಷಣೆ ಮಾಡುತ್ತಿರುವ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರವಿ ಒತ್ತಾಯಿಸಿದರು. |