ರಾಜ್ಯದ ಕೆಲವು ಭಾಗಗಳಲ್ಲಿ ಸುರಿದಿರುವ ಧಾರಾಕಾರ ಮಳೆಯಿಂದಾಗಿ ನೆರೆ ಉಂಟಾಗಿದ್ದು, ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಅಗಸ್ಟ್ 1ರಂದು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ದು ಪ್ರವಾಹ ಪರಿಹಾರ ಕೈಗೊಳ್ಳಲು ಅಗತ್ಯ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುರಿದಿರುವ ಮಳೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆ.ಡಿ.ಎಸ್. ನಾಯಕ ಎಚ್.ಡಿ. ರೇವಣ್ಣ ಮತ್ತಿತರ ನಾಯಕರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕೇಂದ್ರದ ನೆರವು ಬರುವವರೆಗೂ ಕಾಯದ ಕಾಮಗಾರಿಗೆ ಅಗತ್ಯ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಎರಡು ಮೂರು ಜಿಲ್ಲೆ ಹೊರತುಪಡಿಸಿದರೆ ಉಳಿದೆಲ್ಲೆಡೆ ಮಳೆಯಾಗಿದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಹಲವೆಡೆಗಳಲ್ಲಿ ಅತ್ಯಧಿಕ ಮಳೆಯಾಗಿದ್ದು, ಪರಿಹಾರ ಕಾಮಗಾರಿ ಕೈಗೊಳ್ಳುವಲ್ಲಿ ಯಾವುದೇ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿಲ್ಲ ಎಂದು ಅವರು ಸದನದಲ್ಲಿ ಸ್ಪಷ್ಟಪಡಿಸಿದರು. |