ಭಾಷಾ ಮಾಧ್ಯಮ ವಿವಾದ ಕುರಿತಂತೆ ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿರುವ ಪ್ರಮುಖ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ನಲ್ಲೂರ್ ಪ್ರಸಾದ್, ಚಂಪಾ ಸೇರಿದಂತೆ 15ಮಂದಿ ಸಾಹಿತಿಗಳು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಆಗಬೇಕೆಂದು ಯು.ಆರ್.ಅನಂತಮೂರ್ತಿ, ನಿಸಾರ್ ಅಹಮ್ಮದ್, ನಲ್ಲೂರ್ ಪ್ರಸಾದ್, ಚಂಪಾ, ಎಲ್.ಎಸ್.ಶೇಷಗಿರಿ ರಾವ್ ಸೇರಿದಂತೆ 15ಮಂದಿ ಸಾಹಿತಿಗಳು ಸರ್ವೋಚ್ಛನ್ಯಾಯಾಲಯಕ್ಕೆ ಸಲ್ಲಿಸಿರುವ ಪಿಐಎಲ್‌ನಲ್ಲಿ ಕೋರಿದ್ದಾರೆ.ಭಾಷಾ ಮಾಧ್ಯಮ ಕುರಿತಂತೆ ರಾಜ್ಯ ಸರ್ಕಾರ ತಳೆದಿರುವ ನಿಲುವಿಗೆ ಬೆಂಬಲವಾಗಿ ಈ ಮೇಲ್ಮನವಿಯನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಜು.27ಕ್ಕೆ ಸುಪ್ರೀಂಕೋರ್ಟ್ ನಿಗದಿಪಡಿಸಿದೆ.ಭಾಷಾ ಮಾಧ್ಯಮ ನೀತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿತ್ತು.ಭಾಷಾ ಮಾಧ್ಯಮ ನೀತಿ ವಿವಾದ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು, ಆಗಸ್ಟ್ ಅಂತಿಮ ವಾರಕ್ಕೆ ವಿಚಾರಣೆಯನ್ನು ನಿಗದಿಪಡಿಸಿತ್ತು. ಅಲ್ಲದೇ ಶಾಲೆಗಳನ್ನು ಮುಚ್ಚುವ ಆದೇಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಸರ್ವೋಚ್ಚನ್ಯಾಯಾಲಯ ಸೂಚನೆ ನೀಡಿತ್ತು.ಇದೀಗ ಭಾಷಾ ಮಾಧ್ಯಮ ಕುರಿತಂತೆ ಎದ್ದಿರುವ ವಿವಾದಕ್ಕೆ ರಾಜ್ಯದ ಪ್ರಮುಖ ಸಾಹಿತಿಗಳು ಬೆಂಬಲ ನೀಡುವ ಮೂಲಕ ಸರ್ಕಾರದ ವಾದಕ್ಕೆ ಬಲಬಂದಂತಾಗಿದೆ. |