ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಟೈಂ ಬಾಂಬ್ ತಯಾರಿ ನಿಪುಣನೊಬ್ಬ ಬುಧವಾರ ಕೊಚ್ಚಿಯಲ್ಲಿ ಸೆರೆಸಿಕ್ಕಿದ್ದು, 2004ರಿಂದ ಕೇರಳದಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದನಾ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ.
ಬಂಧಿತ ಹಲೀಂ ಬೆಂಗಳೂರು ಸ್ಫೋಟದಲ್ಲಿ ಮಾತ್ರವಲ್ಲದೆ 2006ದಲ್ಲಿ ಕೊಚ್ಚಿಯಲ್ಲಿ ನಡೆದ ಅವಳಿ ಸ್ಫೋಟದಲ್ಲಿಯೂ ಕೈವಾಡ ಹೊಂದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಕೊಚ್ಚಿ ಪೊಲೀಸ್ ಆಯುಕ್ತ ಮನೋಜ್ ಅಬ್ರಹಾಂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೊಚ್ಚಿ ಸ್ಫೋಟದ ಸಂಚನ್ನು ಸಹಚರ ತಾಡಿಕ್ಕರನ್ ನಸೀರ್ ಎಂಬಾತನೊಂದಿಗೆ ಸೇರಿ ರೂಪಿಸಿದ್ದಾಗಿ ಹಲೀಂ ಹೇಳಿದ್ದು, ಇವರಿಬ್ಬರೂ ಕೇರಳದ ಕಣ್ಣೂರು ಜಿಲ್ಲೆಯವರು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನಿ ಮೂಲದ ಭಯೋತ್ಪಾದಕ ಸಂಘಟನೆ ಜೈಶೆ ಮೊಹಮದ್‌ಗೆ ಯುವಕರನ್ನು ಸೇರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಹಲೀಂ ಅತ್ಯಾಧುನಿಕ ಬಾಂಬ್‌ಗಳು ಹಾಗೂ ಎಲೆಕ್ಟ್ರಾನಿಕ್ ನಿಯಂತ್ರಕಗಳನ್ನು ತಯಾರಿಸುವಲ್ಲಿ ನಿಪುಣನಾಗಿದ್ದು, ಲಷ್ಕರ್ ಇ ತೋಯ್ಬಾ ಸಂಘಟನೆಯು ದೇಶಾದ್ಯಂತ ನಡೆಸಿದ ದುಷ್ಕೃತ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಕ್ಕೆ ಗಡಿ ದಾಟಿ ಹೋಗಲು ಪ್ರಯತ್ನಿಸಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಮೃತಪಟ್ಟ ಐವರು ಯುವಕರಲ್ಲಿ ನಾಲ್ಕು ಮಂದಿಯೂ ಹಲೀಂ ಸಹಚರರು ಎಂದು ತಿಳಿದುಬಂದಿದೆ.
ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಾರ್ಯಕರ್ತನಾಗಿರುವ ಹಲೀಂ, 2005ರಲ್ಲಿ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸಿರ್ ಮದನಿ ಬಂಧನ ವಿರೋಧಿಸಿ ತಮಿಳುನಾಡಿನ ಕಲಮಶ್ಶೆರಿ ಬಸ್‌ಗೆ ಬೆಂಕಿ ಇಟ್ಟ ಪ್ರಕರಣದಲ್ಲಿಯೂ ಆರೋಪಿ. ಹೈದರಾಬಾದ್ ಮೂಲದ ಭಯೋತ್ಪಾದನಾ ಸಂಘಟನೆಗೆ ಸೇರಿದವನಾಗಿದ್ದಾನೆ ಎಂದು ಅಬ್ರಹಾಂ ವಿವರಿಸಿದ್ದಾರೆ.
ಕೇರಳದ ಭಯೋತ್ಪಾದನಾ ಸಂಘಟನೆಗಳಿಗೆ ಹಣವೆಲ್ಲಿಂದ ಬರುತ್ತಿದೆ ಮುಂತಾದ ಮಾಹಿತಿಗಳನ್ನೂ ಆತ ಬಯಲುಪಡಿಸಿದ್ದಾನೆ. ಕಣ್ಣೂರಿನ ವಿನೋದ್ ಮತ್ತು ಆಜಾದ್ ಹತ್ಯೆಯಲ್ಲೂ ಈತನ ಕೈವಾಡವಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈತನ ಬಂಧನದೊಂದಿಗೆ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ತನಿಖೆಗೆ ಬಲ ಬಂದಿದೆ. ಯಾಕೆಂದರೆ ಬೆಂಗಳೂರು ಸ್ಫೋಟದ ರೂವಾರಿಗಳೆಂದು ಪರಿಗಣಿಸಲಾದ ಈಗ ಬಾಂಗ್ಲಾದಲ್ಲಿ ಅಡಗಿದ್ದಾನೆಂದು ಹೇಳಲಾಗುತ್ತಿರುವ ನಾಸಿರ್ ಹಾಗೂ ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರು ಪೊಲೀಸರಿಂದ ಬಂಧಿತನಾಗಿರುವ ಸತ್ತಾರ್‌ಗೆ ಈತ ಸಮೀಪದವ ಎಂದು ಹೇಳಲಾಗುತ್ತಿದೆ. |