ಸಹಕಾರ ಸಚಿವ ಲಕ್ಷ್ಮಣ ಸವದಿ ಉಪಾಧ್ಯಕ್ಷರಾಗಿರುವ ಅಪೆಕ್ಸ್ ಬ್ಯಾಂಕ್ ನಿಯಮ ಬಾಹಿರವಾಗಿ ತಮಿಳುನಾಡಿನ ಸಂಸ್ಥೆಯೊಂದಕ್ಕೆ 25ಕೋಟಿ ರೂಪಾಯಿ ಸಾಲ ನೀಡಿದ ಪ್ರಕರಣವೂ ಸೇರಿದಂತೆ ಸಹಕಾರಿ ಸಂಸ್ಥೆಗಳಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಿಬಿಐ ತನಿಖೆ ನಡೆಸಲು ಒಪ್ಪದ ಸರ್ಕಾರದ ಧೋರಣೆ ಪ್ರತಿಭಟಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು, ಅಪೆಕ್ಸ್ ಬ್ಯಾಂಕ್ ನಬಾರ್ಡ್ ನಿಯಮಾವಳಿಯನ್ನು ಉಲ್ಲಂಘಿಸಿ ತಮಿಳುನಾಡಿನ ಹೊಸೂರಿನಲ್ಲಿ ನಿವೇಶನ ಅಭಿವೃದ್ಧಿಪಡಿಸುವ ಸಲುವಾಗಿ ರಿಲಯಬಲ್ ಡೆವಲಪರ್ಸ್ ಸಂಸ್ಥೆಗೆ 25ಕೋಟಿ ರೂಪಾಯಿ ಸಾಲ ನೀಡಿದೆ.
ನಬಾರ್ಡ್ ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆಗೆ 35ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ನೀಡುವ ಅವಕಾಶವಿಲ್ಲ. ಆದರೆ, ಈಗ ಅಪೆಕ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಕೇವಲ ಔಪಚಾರಿಕ ಎಚ್ಚರಿಕೆ ಮಾತ್ರ ನೀಡಿದ್ದರು. ಅನಂತರ ಇದೇ ಐಎಎಸ್ ಅಧಿಕಾರಿಗಳು ಕಾರ್ಯದರ್ಶಿಯಾಗಿ ಬಡ್ತಿ ಪಡೆಯುತ್ತಾರೆ ಎಂದು ದೂರಿದರು.
ಈ ಬಗ್ಗೆ ಉತ್ತರಿಸಿದ ಸವದಿ, ಅಪೆಕ್ಸ್ ಬ್ಯಾಂಕ್ ನಿಯಮಾವಳಿಯಲ್ಲಿ ಈ ರೀತಿ ಸಾಲ ನೀಡಲು ಅವಕಾಶವಿದ್ದರೂ. ನಬಾರ್ಡ್ ನಿಯಮಗಳ ಪ್ರಕಾರ 35ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ಸಾಲ ನೀಡುವಂತಿಲ್ಲ ಎಂಬುದು ನಿಜ. ಹೀಗಾಗಿ ಈ ಸಂಸ್ಥೆಗೆ ನೀಡಲಾಗಿರುವ ಸಾಲವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. |