ದೇಶದ ರಕ್ಷಣೆಗಾಗಿ ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿದ ಮಡಿಕೇರಿಯ ಯೋಧನೊಬ್ಬನಿಗೆ ನಿಯಮದ ಪ್ರಕಾರ ಜಮೀನು ನೀಡದ ಸರ್ಕಾರವನ್ನು ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.
'ನಮ್ಮ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಉಗ್ರರೊಂದಿಗೆ ಹೋರಾಡುವ ಯೋಧರನ್ನು ಈ ರೀತಿ ನಿರ್ಲಕ್ಷಿಸುವುದು ಸಲ್ಲದು' ಎಂದು ತಿಳಿಸಿದ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರು, ಯೋಧ ಕೆ.ಎ.ಸುಬ್ಬಯ್ಯ ಅವರಿಗೆ ಇನ್ನು ಎರಡು ತಿಂಗಳ ಒಳಗೆ ಜಮೀನು ನೀಡುವಂತೆ ಸರ್ಕಾರಕ್ಕೆ ಆದೇಶಿಸಿದರು.
2006ರಲ್ಲಿ ಸುಬ್ಬಯ್ಯ ಅವರು ಕಾಶ್ಮೀರ ಉಗ್ರರೊಂದಿಗೆ ಹೋರಾಡಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಮರಳಿ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರ ನಿಯಮದ ಪ್ರಕಾರ ಯೋಧರಿಗೆ 5ಎಕರೆ ದರ್ಖಾಸ್ತು ಜಮೀನು ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಈ ನಿಯಮದ ಪ್ರಕಾರ ಜಮೀನು ನೀಡುವಂತೆ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಸರ್ಕಾರ ಜಮೀನು ನೀಡಿದ್ದರೂ, ನಂತರದಲ್ಲಿ ಅದು ಅರಣ್ಯ ಪ್ರದೇಶಕ್ಕೆ ಸೇರಿದ್ದು ಎಂದು ಅದನ್ನು ವಾಪಸು ಪಡೆಯಲಾಗಿತ್ತು.
ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅದೇ ಜಮೀನನ್ನು ಬೇರೆಯವರಿಗೆ ನೀಡಿರುವ ಬಗ್ಗೆ ಅವರು ಅರ್ಜಿಯಲ್ಲಿ ದೂರಿದ್ದರು. ಈ ರೀತಿ ಯೋಧರೊಬ್ಬರು ಕೋರ್ಟ್‌ವರೆಗೆ ಬರುವಂತೆ ಮಾಡುವ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅವರಿಗೆ ಮಂಜೂರಾಗಿದ್ದ ಜಮೀನು ನೀಡುವಂತೆ ಇಲ್ಲವೇ ಕುಶಾಲನಗರದಲ್ಲಿ ಬದಲಿ ನಿವೇಶನ ನೀಡುವಂತೆ ಆದೇಶಿಸಿದ್ದಾರೆ. |