ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಗಲಭೆಗೆ ಕಾರಣವಾದ ಕೆಎಚ್‌ಬಿ ಹಗರಣದ ಬಳಿಕ ಇದೀಗ ಜೆಡಿಎಸ್ ಮತ್ತೊಂದು ಹಗರಣವನ್ನು ಬಯಲಿಗೆಳೆದಿದೆ.
ಬೆಂಗಳೂರಿನ ಹೊರವಲಯದ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 316 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ ಎಂದು ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಆರೋಪಿಸಿದ್ದಾರೆ.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ತೆನೆಯೂರು ಎಂಬ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಸುಮಾರು 316 ಎಕರೆ ಗೋಮಾಳವಿತ್ತು. ಈ ಪೈಕಿ 250 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಆ ಜಾಗದಲ್ಲಿ ಕಾಡು ಮರಗಳನ್ನು ಬೆಳೆಯಲಾಗಿತ್ತು. ಉಳಿದ ಜಮೀನು ಕಂದಾಯ ಇಲಾಖೆ ಒಡೆತನದಲ್ಲಿತ್ತು. ಆದರೆ ಕೆಲವು ಪ್ರಭಾವಿ ಶಕ್ತಿಗಳು ರಾಜಕೀಯ ಕೈವಾಡದಿಂದ ನಕಲಿ ದಾಖಲೆ ಸೃಷ್ಟಿಸಿ 120 ಕೋಟಿ ರೂ. ಗೂ ಅಧಿಕ ಬೆಲೆ ಬಾಳುವ ಈ ಜಮೀನನ್ನು ಕಬಳಿಸಿವೆ ಎಂದು ಅವರು ಆರೋಪಿಸಿದ್ದಾರೆ. |