ಬಿಬಿಎಂಪಿ ಸಹಾಯಕ ಆಯುಕ್ತ ಲಕ್ಷ್ಮಣ್ ಎಂಬವರು ಕಚೇರಿಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.
ಬೆಳಿಗ್ಗೆ ವಾಕಿಂಗ್‌ಗೆ ಅಂತ ಮನೆಯಿಂದ ಹೊರಹೋಗಿದ್ದ ಬಿಬಿಎಂಪಿ ಚುನಾವಣಾ ವಿಭಾಗದ ಸಹಾಯಕ ಅಧಿಕಾರಿ ಲಕ್ಷ್ಮಣ್ ಅವರು ಕಚೇರಿಯ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಲಕ್ಷ್ಮಣ್ ಅವರ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆದಿತ್ತು. ಇದರಿಂದಾಗಿ ತನಗೆ ತುಂಬಾ ಅವಮಾನವಾಗಿತ್ತು ಎಂದು ಆತ್ಮಹತ್ಯೆಗೆ ಮುನ್ನ ಲೋಕಾಯುಕ್ತರಿಗೆ, ಕುಟುಂಬ ವರ್ಗದವರಿಗೆ ಬರೆದಿಟ್ಟಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ಕಣ್ಣು ಸೇರಿದಂತೆ ದೇಹದ ಅಂಗಗಳನ್ನು ದಾನವಾಗಿ ನೀಡುವಂತೆ ಸೂಚಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ವಿಆರ್‌ಎಸ್‌ಗೆ ಅರ್ಜಿ ಸಲ್ಲಿಸಿದ್ದರು. ಒಳ್ಳೆ ಅಧಿಕಾರಿಯಾಗಿದ್ದ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದರಿಂದ ಅವರು ತೀವ್ರವಾಗಿ ಅವಮಾನಕ್ಕೆ ಒಳಗಾಗಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಪ್ರಕರಣವನ್ನು ಹಲಸೂರುಗೇಟ್ ಪೊಲೀಸರು ದಾಖಲಿಸಿಕೊಂಡಿದ್ದರು. |