ಕಳೆದ ವರ್ಷ ನಗರದಲ್ಲಿ ನಡೆದ ಚರ್ಚ್ ಮೇಲಿನ ದಾಳಿನ ಪ್ರಕರಣದಲ್ಲಿ ಪೊಲೀಸರು ದುರುದ್ದೇಶಪೂರ್ವಕವಾಗಿ ತನ್ನ ಮೇಲೆ ಚಾರ್ಜ್‌ಶೀಟ್ ಹಾಕಿರುವುದಾಗಿ ಚರ್ಚ್ ದಾಳಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗದ ವಿಚಾರಣೆ ಮುಂದೆ ವಾಮಂಜೂರು ನಿವಾಸಿ ಮಾರಿಯೋ ರೋಚ್ ವಿವರಣೆ ನೀಡಿದ್ದಾರೆ.
2008ರ ಸೆಪ್ಟೆಂಬರ್‌ನಲ್ಲಿ ಚರ್ಚ್ ಮೇಲೆ ನಡೆದ ದಾಳಿ ಕುರಿತಂತೆ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಸೋಮಶೇಖರ್ ಅವರು ಮೂರು ದಿನಗಳ ಕಾಲ ವಿಚಾರಣೆ ನಡೆಸಲು ಉದ್ದೇಶಿಸಿದ್ದು, ಬುಧವಾರದ ವಿಚಾರಣೆ ವೇಳೆ ಮಾರಿಯೋ ಈ ಹೇಳಿಕೆಯನ್ನು ನೀಡಿದ್ದಾರೆ.
ಆಯೋಗ ಮುಂದೆ ಹಾಜರಾಗುವ ಮುನ್ನ ತಾನು ತನ್ನ ಮೇಲೆ ಪೊಲೀಸರು ಹಾಕಿರುವ ಚಾರ್ಜ್‌ಶೀಟ್ ಬಗ್ಗೆ ನೆರೆಹೊರೆಯವರಿಂದ ಓದಿಸಿ ತಿಳಿದುಕೊಂಡಿರುವುದಾಗಿ ಹೇಳಿದರು. ಅಲ್ಲದೇ ದಾಳಿ ನಡೆದಿರುವ ಚರ್ಚ್ ಹಾಲ್‌ನಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತಾನು ಭಾಗಿಯಾಗಿದ್ದೆ ಎಂದು ಮಂಗಳೂರು ಗ್ರಾಮೀಣ ಪೊಲೀಸರು ಆರೋಪಪಟ್ಟಿ ದಾಖಲಿಸಿಕೊಂಡಿರುವುದಾಗಿ ಆಯೋಗದ ಮುಂದೆ ದೂರಿದರು.
ಅವರಂತೆಯೇ ವಾಮಂಜೂರಿನ ಮತ್ತೊಬ್ಬ ನಿವಾಸಿಯಾದ ಫಿಲೋಮಿನಾ ಪಿರೇರಾ ಕೂಡ, 'ಸೆಪ್ಟೆಂಬರ್ 15ರಂದು ನಡೆದಿರುವ ಹಿಂಸಾಚಾರಕ್ಕೆ ಕ್ರಿಶ್ಚಿಯನ್ ಸಮುದಾಯವೇ ಹೊಣೆಗಾರರು' ಎಂಬ ಸರ್ಕಾರಿ ವಕೀಲ ಎಲ್.ಎನ್.ಹೆಗ್ಡೆ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಆಯೋಗಕ್ಕೆ ತಿಳಿಸಿದರು. ಅಲ್ಲದೇ ಸೆಪ್ಟೆಂಬರ್ 14 ಮತ್ತು 15ರಂದು ವಾಮಂಜೂರು ಚರ್ಚ್‌ನ ಸುತ್ತಮುತ್ತ ನೂರಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತರಾಗಿ ಗಸ್ತು ತಿರುಗುತ್ತಿದ್ದರು ಎಂದು ವಾಮಂಜೂರು ನಿವಾಸಿ ರಜತ್ ಪಿರೇರಾ ಆಯೋಗಕ್ಕೆ ವಿವರಿಸಿದರು. |