'ಸಂಯಮದ ನಡವಳಿಕೆ ಮೂಲಕ ಇತರ ಸದಸ್ಯರಿಗೆ ಮಾದರಿಯಾಗಿ ಸದನಕ್ಕೆ ಮಾರ್ಗದರ್ಶನ ಮಾಡಬೇಕಾದ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಅವರೇ ಬೆಂಕಿ ಉಗುಳುತ್ತಾ ಇತರರ ಬಗ್ಗೆ ತಾತ್ಸಾರದ ವರ್ತನೆ ತೋರುತ್ತಿದ್ದಾರೆ' ಎಂದು ಸಭಾ ನಾಯಕ ಡಾ| ವಿ.ಎಸ್. ಆಚಾರ್ಯ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ವಿಧಾನಪರಿಷತ್‌ನಲ್ಲಿ ನಡೆಯಿತು.
ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ಮೋಟಮ್ಮ ಅವರ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವೆ ಗೋವಿಂದ ಕಾರಜೋಳ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಉಗ್ರಪ್ಪ ಅವರ ಮಧ್ಯ ಪ್ರವೇಶದಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಸಚಿವರು ಮತ್ತು ಉಗ್ರಪ್ಪ ಅವರ ನಡುವಿನ ತೀವ್ರ ಮಾತಿನ ಚಕಮಕಿ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಇದನ್ನು ತೀವ್ರ ಆಕ್ಷೇಪಿಸಿದ ಗೃಹ ಸಚಿವರು, ಹಿರಿಯರ ಸದನವಾದ ಇಲ್ಲಿ ವಿಷಯದ ಬಗ್ಗೆ ಬೆಳಕು ಚೆಲ್ಲುವ ಮೂಲಕ ಅರ್ಥಪೂರ್ಣ ಚರ್ಚೆಗೆ ಮಾರ್ಗದರ್ಶನ ಮಾಡಬೇಕಾದ ವಿರೋಧಪಕ್ಷದ ನಾಯಕರು ಪ್ರತಿ ವಿಚಾರಕ್ಕೂ ಬೆಂಕಿ ಉಗುಳುತ್ತಾ ಸಚಿವರ ಬಗ್ಗೆ ಫೈಲ್ ನೋಡಿ, ಓದಿ ಬನ್ನಿ ಎನ್ನುವಂತಹ ತಾತ್ಸಾರದ ಮಾತು ಸರಿಯಲ್ಲ. ತಮ್ಮ ನಡವಳಿಕೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು. |