ರೈತರ ಶ್ರಮಕ್ಕಾಗಿ ಒಂದು ಹಾಡನ್ನು ಅರ್ಪಿಸುವ ನಿಟ್ಟಿನಲ್ಲಿ ನಾಡಗೀತೆ ಮಾದರಿಯಲ್ಲೇ ಕುವೆಂಪು ವಿರಚಿತ 'ನೇಗಿಲ ಯೋಗಿ' ಕವನವನ್ನು ರೈತಗೀತೆಯಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬದಲ್ಲಿ ರೈತರಿಗಾಗಿಯೇ ಒಂದು ರೈತರಿಗಾಗಿಯೇ ಒಂದು ಹಾಡನ್ನು ಸಮರ್ಪಿಸಲು, ಆತನ ಶ್ರಮಕ್ಕೆ ಗೌರವ ಸೂಚಿಸಲು ರೈತಗೀತೆ ಹಾಡುವ ಉದ್ದೇಶ ಹೊಂದಲಾಗಿದೆ.
ಆ ಹಿನ್ನೆಲೆಯಲ್ಲಿ ಆಗೋಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿ.ಅಶ್ವಥ್ ನೇತೃತ್ವದಲ್ಲಿ ನೇಗಿಲ ಯೋಗಿ ಹಾಡನ್ನು ಹಾಡಿಸಲಾಗುವುದು ಎಂದು ಸದನದಲ್ಲಿ ವಿವರಿಸಿದರು.
'ಜೀವ ಭಾವ ಜಗತ್ತು' ಎಂಬ ಕಾರ್ಯಕ್ರಮದಡಿ ಸಾವಯವ ಕೃಷಿ ಮಿಷನ್ ಜುಲೈ 14ರಂದು ವಿಕಾಸಸೌಧದಲ್ಲಿ ಸಭೆ ಕರೆದಿತ್ತು. ಸಭೆಯಲ್ಲಿ ನಾಡಿನ ಹಿರಿಯ ಸಂಗೀತ ಕಲಾವಿದರು, ಸಾಹಿತಿಗಳು, ಕವಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೈಗೊಂಡ ನಿರ್ಣಯದ ಒಂದು ಭಾಗ-ರೈತನನ್ನು ಉಲ್ಲಾಸ, ಉತ್ಸಾಹಗೊಳಿಸಲು ಪ್ರತಿ ಜಿಲ್ಲೆಗಳಿಗೆ ತೆರಳಿ ಕಾರ್ಯಕ್ರಮ ನೀಡುವುದಾಗಿತ್ತು. ಇನ್ನೊಂದು ಪ್ರಮುಖ ಅಂಶವಾಗಿ ರೈತನ ಹಾಡನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. |