ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ನಡೆದಿರುವ 252 ಕೋಟಿ ರೂ.ಅವ್ಯವಹಾರವನ್ನು ಸಿಓಡಿ ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಪರಿಷತ್‌ನಲ್ಲಿ ಗುರುವಾರ ನೀಡಿದ ಭರವಸೆಯಿಂದ ತೃಪ್ತರಾದ ಕಾಂಗ್ರೆಸ್ ಸದಸ್ಯರು ಧರಣಿಯನ್ನು ವಾಪಸ್ ಪಡೆದರು.
ಸದನ ಆರಂಭವಾಗುತ್ತಿದ್ದಂತೆಯೇ ನಿನ್ನೆಯಿಂದ ವಿಧಾನಪರಿಷತ್ತಿನಲ್ಲಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ಇಂದೂ ಸಹ ಧರಣಿ ಮುಂದುವರಿಸಿ ಘನತ್ಯಾಜ್ಯ ವಿಲೇವಾರಿಯಲ್ಲಿ ಆಗಿರುವ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದರು.
ಸಭಾಪತಿಗಳ ಕೊಠಡಿಯಲ್ಲಿ ನಡೆದ ಮಾತುಕತೆಯಂತೆ ಸರ್ಕಾರ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಲು ಸಿದ್ಧವಿದೆ. ಅಲ್ಲದೇ ಅವ್ಯವಹಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಲಲು ಪಾಲಿಕೆ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಧರಣಿ ಕೊನೆಗೊಳಿಸಬೇಕೆಂದು ಸಭಾನಾಯಕ ವಿ.ಎಸ್.ಆಚಾರ್ಯ ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿದರು.
ಹಗರಣಕ್ಕೆ ಸಂಬಂಧಿಸಿದಂತೆ ಕಾರ್ಯಪಡೆ ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲಾಖಾ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ 9-10ರ ಅವಧಿಯಲ್ಲಿ ನಡೆದಿರುವ ಅವ್ಯವಹಾರವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಪಕ್ಷದ ನಾಯಕ ಉಗ್ರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಈ ಹಂತದಲ್ಲಿ ಎದ್ದು ನಿಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘನತ್ಯಾಜ್ಯ ವಿಲೇವಾರಿಯಲ್ಲಿ ಅವ್ಯವಹಾರ ಆಗಿರುವುದು ನಿಜ. ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸಿದ್ಧವಿದೆ. ಆದರೆ ಸರ್ಕಾರವನ್ನು ಹಾಗೆ ಮಾಡಿ, ಹೀಗೆ ಮಾಡಿ ಎಂದು ಒತ್ತಡ ಹೇರಬೇಡಿ ಎಂದರು. |