ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮತ್ತೆ ಎರಡು ತಿಂಗಳ ಕಾಲ ಮುಂದೂಡುವಲ್ಲಿ ರಾಜ್ಯ ಸರ್ಕಾರ ತಾತ್ಕಾಲಿಕ ಯಶ ಕಂಡಿದೆ.
ಪಾಲಿಕೆಯ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವಲ್ಲಿ ಕೆಲ ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಗಸ್ಟ್ 14ರೊಳಗಾಗಿ ಈ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಗುರುವಾರ ಮತ್ತೊಮ್ಮೆ ಸರ್ಕಾರಕ್ಕೆ ಕಟ್ಟು ನಿಟ್ಟಿನ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಜುಲೈ 31ರೊಳಗೆ ಚುನಾವಣೆ ನಡೆಸಲೇಬೇಕೆಂಬ ಹೈಕೋರ್ಟ್‌ನ ಹಿಂದಿನ ಸುಗ್ರೀವ ಆಜ್ಞೆಯಿಂದ ತಪ್ಪಿಸಿಕೊಂಡಂತಾಗಿದ್ದು, ಸೆಪ್ಟೆಂಬರ್ ಕೊನೆ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ವಿಷಯದಲ್ಲಿ ಸರ್ಕಾರ ಎಸಗಿರುವ ತೀವ್ರ ಲೋಪದೋಷಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ನೇತೃತ್ವದ ವಿಭಾಗೀಯ ಪೀಠ ಈ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಆಗಸ್ಟ್ 14ರವರೆಗೆ ಕಾಲಾವಕಾಶ ನೀಡಿದೆ. |