ಶತಮಾನದ ಸುದೀರ್ಘ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಗುಲ್ಬರ್ಗಾದಲ್ಲಿ ವಿಕಲಚೇತನ, ಬುದ್ಧ ಮಾಂದ್ಯ ಮಕ್ಕಳನ್ನು ಮಣ್ಣಿನಲ್ಲಿ ಹೂಳುವ ಅನಿಷ್ಟ ಪದ್ಧತಿಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂತಹ ಮೂಢನಂಬಿಕೆಗಳನ್ನು ಸಹಿಸೋದಿಲ್ಲ ಎಂದು ವಿಧಾನಸಭೆಯಲ್ಲಿ ಗುರುವಾರ ತಿಳಿಸಿದರು.
ಇಂತಹ ಅನಿಷ್ಟ ಪದ್ಧತಿ ನಿಷೇಧಿಸಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ನಿನ್ನೆ ಗುಲ್ಬರ್ಗಾದಲ್ಲಿ ನಡೆದ ಘಟನೆ ಕುರಿತಂತೆ ಜಿಲ್ಲಾಧಿಕಾರಿಯವರಿಗೆ ಕಟ್ಟನಿಟ್ಟಿನ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಇಂತಹ ಅನಿಷ್ಟ ಪದ್ಧತಿ ನಡೆಯದಂತೆ ಎಚ್ಚರಿಕೆ ಕೂಡ ನೀಡಲಾಗಿದೆ ಎಂದು ಹೇಳಿದರು.
ಬುಧವಾರ ಸೂರ್ಯನಿಗೆ ಗ್ರಹಣ ಹಿಡಿದಿದ್ದರೆ, ಗುಲ್ಬರ್ಗಾದ ಮೋಮಿನಪುರಾ ಜನರ ಬುದ್ದಿಗೆ ಗ್ರಹಣ ಹಿಡಿದಿತ್ತು. ಸೂರ್ಯಗ್ರಹಣದ ಸಮಯದಲ್ಲಿ ವಿಕಲಚೇತನ, ಬುದ್ದಿ ಮಾಂದ್ಯ ಮಕ್ಕಳನ್ನು ಮಣ್ಣಲ್ಲಿ ಹೂತಿಟ್ಟರೆ ಅದು ಸರಿ ಹೋಗುತ್ತದೆ ಎಂಬ ನಂಬಿಕೆ ಇದ್ದ ಕಾರಣ ಸುಮಾರು 100ಕ್ಕೂ ಅಧಿಕ ಮಕ್ಕಳನ್ನು ಮಣ್ಣಲ್ಲಿ ಮಕ್ಕಳ ತಲೆಯನ್ನು ಹೊರತುಪಡಿಸಿ ಹೂತಿಡಲಾಗಿದ್ದ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಮುಸ್ಲಿಮರೇ ಅಧಿಕವಾಗಿರುವ ಮೋಮಿನಪುರಾ ಬಡಾವಣೆಯ ಖಾರಿ ಬೌಡಿ ಮೈದಾನದ ನಯಾ ಮೊಹಲ್ಲಾ, ಬಿಲಾಲಾಬಾದ್, ಜವಾಹರ್ ಹಿಂದ್ ಶಾಲೆ ಮೈದಾನಗಳಲ್ಲಿ ಬುಧವಾರ ಮುಂಜಾನೆ 5.30ಕ್ಕೆ ವಿಕಲಚೇತನ ಮಕ್ಕಳನ್ನು ಹೂಳುವ ಕೆಲಸಕ್ಕೆ ಚಾಲನೆ ದೊರಕಿತ್ತು. ಬೆಳಗಿನ 10-30ರವರೆಗೂ ಮಣ್ಣಿನಲ್ಲಿ ಸಿಲುಕಿ ಕೈಕಾಲು ಅಲ್ಲಾಡಿಸದೆ ಮಕ್ಕಳು ಯಾತನೆ ಪಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಶಾಸಕ ಖಮರುಲ್ಲಾ ಸಮರ್ಥನೆ: ಗ್ರಹಣದ ದಿನದಂದು ಮಕ್ಕಳನ್ನು ಮಣ್ಣಲ್ಲಿ ಹೂತಿಟ್ಟ ಘಟನೆಯನ್ನು ಶಾಸಕ ಖಮರುಲ್ಲಾ ಇಸ್ಲಾಂ ಬಲವಾಗಿ ಸಮರ್ಥಿಸಿಕೊಂಡಿದ್ದು, ಇದು ಕಳೆದ 30ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿದ್ದು, ಗ್ರಹಣದ ದಿನ ಇಂತಹ ಪದ್ಧತಿ ಕೆಲವೆಡೆ ನಡೆದಿರುವುದಾಗಿಯೂ ಹೇಳಿದರು. |