ಇಸ್ಕಾನ್‌ನ ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆಯಲ್ಲಿ ನೆಪದಲ್ಲಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಅವ್ಯವಹಾರ ನಡೆಸುತ್ತಿರುವ ಪ್ರಕರಣದ ಸಮಗ್ರ ತನಿಖೆಗಾಗಿ ಸದನ ಸಮಿತಿ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವ ಅಕ್ಷಯ ಪಾತ್ರೆ ಕಾರ್ಯಕ್ರಮದ ಹೆಸರಿನಲ್ಲಿ ಇಸ್ಕಾನ್ ದೇಶ-ವಿದೇಶಗಳಲ್ಲಿ ನೂರಾರು ಕೋಟಿ ರೂ.ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆ ಸದನ ಸಮಿತಿ ರಚಿಸಬೇಕು ಎಂಬ ಪ್ರತಿಪಕ್ಷ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರ ಆಗ್ರಹದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಆದರೆ ಇಸ್ಕಾನ ಸಂಸ್ಥೆಯಿಂದ ಬಿಸಿಯೂಟ ಗುತ್ತಿಗೆಯನ್ನು ವಾಪಸ್ ಪಡೆದುಕೊಳ್ಳಬೇಕೆಂಬ ಪ್ರತಿಪಕ್ಷದ ಮತ್ತೊಂದು ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ. ಅಸಹಾಯಕ ಮಕ್ಕಳ ಚಿತ್ರಗಳನ್ನು ಬಳಸಿಕೊಂಡು ವಿದೇಶಗಳಲ್ಲಿ ದೇಣಿಗೆ ಸಂಗ್ರಹಿಸುವುದನ್ನು ಸಹಿಸುವುದಿಲ್ಲ ಎಂದು ಸರ್ಕಾರದ ಪರವಾಗಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪ್ರಶ್ನೋತ್ತರ ಕಲಾಪದ ನಂತರ ವಿಶೇಷವಾಗಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ಸಿನ ಡಿಕೆಶಿ ಅವರು ಇಸ್ಕಾನ್ ಸಂಸ್ಥೆಯ ಚಟುವಟಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. |