ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ನೀಡುವ ಶಿಫಾರಸಿನ ಆಧಾರದ ಮೇಲೆ ರಾಜ್ಯ ಸರ್ಕಾರದ ಯಾವುದೇ ಮುಲಾಜಿಗೂ ಒಳಗಾಗದೇ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.
ಗುರುವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಎನ್.ಮಂಜುನಾಥ್ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಜೆಡಿಎಸ್‌ನ ಎಂ.ಸಿ.ನಾಣಯ್ಯ, ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಮೊದಲಾದವರು ಸರ್ಕಾರ ಲೋಕಾಯುಕ್ತ ಶಿಫಾರಸನ್ನು ಧಿಕ್ಕರಿಸಿ ಕೆಲವು ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ, 63 ಉನ್ನತಾಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಮತ್ತು ಲೋಕಾಯುಕ್ತದಲ್ಲಿ ಒಟ್ಟು 18ಅಧಿಕಾರಿಗಳ ವಿಚಾರಣೆ ಬಾಕಿ ಇದೆ. ಈ ಪೈಕಿ 8ಮಂದಿ ಐಎಎಸ್, ಇಬ್ಬರು ಐಪಿಎಸ್, 47ಕೆಎಎಸ್ ಮತ್ತು 6ಮಂದಿ ಐಎಎಫ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಬಾಕಿ ಇದ್ದರೆ, ಲೋಕಾಯುಕ್ತದ ಮುಂದೆ ಮೂವರು ಐಎಎಸ್, ಇಬ್ಬರು ಐಪಿಎಸ್ ಹಾಗೂ 12ಕೆಎಎಸ್ ಮತ್ತು ಓರ್ವ ಐಎಫ್‌ಎಸ್ ಅಧಿಕಾರಿ ವಿಚಾರಣೆ ಬಾಕಿ ಇದೆ ಎಂದರು.
ಆದರೆ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಇರಾದೆ ಸರ್ಕಾರಕ್ಕಿಲ್ಲ, ಐಎಎಸ್ ಅಥವಾ ಐಪಿಎಸ್ ಇರಲಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಲಿಸಲಿದೆ ಎಂದು ಹೇಳಿದರು. |