ನಗರದ ವಿವಿಧ ರಸ್ತೆಗಳ ಅಗಲೀಕರಣಕ್ಕಾಗಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 947ಮರಗಳನ್ನು ಧರೆಗೆ ಉರುಳಿಸಲಾಗಿದೆ. ಆದರೆ ಅಭಿವೃದ್ಧಿ ಯೋಜನೆಗೆ ಅನಿವಾರ್ಯವಾದರೆ ಮಾತ್ರ ಮರ ಕಡಿಯಲಾಗುತ್ತದೆ. ಇಲ್ಲದಿದ್ದರೆ ಒಂದು ಮರವನ್ನೂ ಕಡಿಯಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಎಂ.ಶ್ರೀನಿವಾಸ್, 2007-08ರಲ್ಲಿ ಕತ್ತರಿಸಿದ ಮರದ ಮಾರಾಟದಿಂದ ಕೇವಲ 5.73ಲಕ್ಷ ರೂಪಾಯಿ ಆದಾಯ ಬಂದಿದೆ. ಆದರೆ, 2008-09ನೇ ಸಾಲಿನಲ್ಲಿ ಕತ್ತರಿಸಿದ ಕೇವಲ 294ಮರಗಳಿಂದ 15.90ಲಕ್ಷ ರೂಪಾಯಿ ಆದಾಯ ಬಂದಿದೆ. ಆದರೆ, ಹೆಚ್ಚು ಮರಗಳಿಗೆ ಕಡಿಮೆ ಮತ್ತು ಕಡಿಮೆ ಮರಗಳಿಗೆ ಹೆಚ್ಚು ಹಣ ಬಂದಿರುವ ಹಿಂದಿನ ರಹಸ್ಯವೇನು?ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಹರಾಜಿನಲ್ಲಿ ಪಾಲ್ಗೊಳ್ಳುವ ಒಂದು ದೊಡ್ಡ ಗ್ಯಾಂಗ್ ಇದೆ. ಇಂತಹ ಗ್ಯಾಂಗಿನ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. |