ವಿಧಾನಸಭಾ ಉಪಚುನಾವಣೆಯ ಕಾವು ಏರತೊಡಗಿದೆ. ಐದು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ನಿಗದಿಗೊಳಿಸಿದ್ದು, ಉಳಿದ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ನಿರ್ಧರಿಸಲು ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಈ ಸಂಬಂಧ ಶುಕ್ರವಾರ ಮತ್ತೆ ರಾಜ್ಯ ಉಸ್ತುವಾರಿ ಗುಲಾಂ ನಬಿ ಅಜಾದ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಕೆಲವು ಮೂಲಗಳ ಪ್ರಕಾರ ಚಿತ್ತಾಪುರ ಕ್ಷೇತ್ರಕ್ಕೆ ಮಲ್ಲಿಕಾರ್ಜು ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ, ಗೋವಿಂದರಾಜನಗರ ಕ್ಷೇತ್ರಕ್ಕೆ ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ ಪ್ರಿಯ ಕೃಷ್ಣ ಹಾಗೂ ಕೊಳ್ಳೆಗಾಲ ಕ್ಷೇತ್ರಕ್ಕೆ ಮಾಜಿ ಶಾಸಕ ಜಯಣ್ಣ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ.
ಬಾಕಿ ಉಳಿದಿರುವ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮುನ್ನ ಜೆಡಿಎಸ್ ಜೊತೆ ಮೈತ್ರಿ ವಿಚಾರದ ಬಗ್ಗೆ ಕಾಂಗ್ರೆಸ್ ಸ್ಪಷ್ಟ ನಿಲುವು ಕೈಗೊಳ್ಳಬೇಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. |