ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಕಾನೂನು ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಸಮ್ಮತಿಯನ್ನು ಈ ವಾರದೊಳಗೆ ಪಡೆದುಕೊಳ್ಳುವ ಪ್ರಯತ್ನ ನಡೆಸುವುದಾಗಿ ಹೇಳಿದರು.
ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ ಕಾನೂನನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿಲ್ಲ. ಗೋವುಗಳ ಸಾಗಾಣಿಕೆ ಆಗುತ್ತಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಹಾಗಾಗಿಯೇ ಹೊಸ ಕಾಯ್ದೆ ರೂಪಿಸುವ ಯೋಚನೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಕಾನೂನು ಇಲಾಖೆ, ಗೃಹ ಇಲಾಖೆ ಮತ್ತು ಪಶು ಸಂಗೋಪನೆ ಇಲಾಖೆ ಜೊತೆಗೂಡಿ ಈಗಾಗಲೇ ಕರಡು ಪ್ರತಿಯೊಂದನ್ನು ಸಿದ್ಧಪಡಿಸಿದೆ. ಎಲ್ಲಾ ಇಲಾಖೆಗಳು ಸಹಿ ಮಾಡಿ ಇದನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಲಿದ್ದು, ಮುಂದಿನ ವಾರದೊಳಗೆ ಮಂಜುರಾತಿ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದಕ್ಕೆ ವಿರೋಧ ಪಕ್ಷಗಳ ಬೆಂಬಲವು ಬೇಕಿದೆ ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು, ಸರ್ಕಾರ ನಿರ್ಭಯವಾಗಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ, ಯಾವ ಪಕ್ಷಗಳಿಗೂ ಇದನ್ನು ವಿರೋಧಿಸುವ ಹಕ್ಕಿಲ್ಲ. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಒಂದಾಗಬೇಕೆಂದು ಕರೆ ನೀಡಿದರು. |