ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ವಿದ್ಯುತ್ ಕೊರತೆ ಮುಕ್ತ ರಾಜ್ಯವನ್ನಾಗಿ ಮಾಡಲು ಪಣ ತೊಡಲಾಗಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬಿಜಾಪುರ ಮತ್ತು ಬಾಗಲಕೋಟೆ ವಿದ್ಯುತ್ ಸಮಸ್ಯೆ ಕುರಿತು ನಡೆಸಿದ ಚರ್ಚೆಗೆ ಉತ್ತರ ನೀಡಿದ ಅವರು, ವಿದ್ಯುತ್ ಉತ್ಪಾದನೆ ಮಾಡುವ ಉತ್ತರ ಕನ್ನಡ, ಬಿಜಾಪುರ, ಶಿವಮೊಗ್ಗ ಮತ್ತು ರಾಯಚೂರು ಜಿಲ್ಲೆಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ 7 ಸಾವಿರ ಮೆಗವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ. ಇದನ್ನು ತುಂಬಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅಗತ್ಯ ಬಿದ್ದರೆ ವಿದ್ಯುತ್ ಖರೀದಿ ನಡೆಸಲು ಸರ್ಕಾರ ಬದ್ಧವಾಗಿದೆ ಎಂದರು.
ವಿದ್ಯುತ್ ಉತ್ಪಾದನೆಗೆ ಅನುಮತಿ ಪಡೆದು ಕಾರ್ಯ ಆರಂಭಿಸದ 52 ಕಂಪೆನಿಗಳ ಪರವಾನಿಗಿ ರದ್ದು ಮಾಡಲಾಗಿದೆ ಎಂದು ತಿಳಿಸಿದ ಅವರು, ಬಿಜಾಪುರ ಜಿಲ್ಲೆಯ ಕೂಡಗಿಯಲ್ಲಿ 4 ಸಾವಿರ ಮೆ.ವ್ಯಾ. ಸಾಮರ್ಥ್ಯದ ಶಾಖೋತ್ಪನ್ನ ಘಟಕ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. |