ತಮ್ಮ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ್ದ ರೈತ ಚಳವಳಿಗಾರರ ಮೇಲೆ ಹೂಡಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ಸು ಪಡೆಯಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಅವರು ಶುಕ್ರವಾರ ಕಾವೇರಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ರೈತರು ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಿದ್ದರು. ಅವರ ಮೇಲೆ ಸರ್ಕಾರದ ವತಿಯಿಂದ ಪೊಲೀಸರು ಮೊಕದ್ದಮೆ ಹೂಡಿದ್ದು, ರೈತರ ಮೇಲಿನ ಎಲ್ಲಾ ಮೊಕದ್ದಮೆ ಹಿಂಪಡೆಯಲಾಗುವುದು ಎಂದರು.
ನಾಡಿನ ನೆಲ, ಜಲ, ಭಾಷೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ತಿಳಿಸಿದ ಅವರು, ಈವರೆಗೂ ರಾಷ್ಟ್ರಗೀತೆ ಹಾಗೂ ನಾಡಗೀತೆಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದು, ಅದೇ ರೀತಿಯಲ್ಲಿ ಆ.15ರಿಂದ ರಾಷ್ಟ್ರಕವಿ ಕುವೆಂಪು ಅವರ ನೇಗಿಲ ಯೋಗಿ ಗೀತೆಯನ್ನು ರೈತ ಗೀತೆಯನ್ನಾಗಿ ಜಾರಿಗೆ ತರಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಶ್ರಾವಣ ಮಾಸದ ಮೊದಲ ಶುಕ್ರವಾರ ತಾವು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದು, ಕಳೆದ ಬಾರಿ ಆಗಸ್ಟ್ ತಿಂಗಳಲ್ಲಿ ಬಾಗಿನ ಅರ್ಪಿಸಲಾಗಿತ್ತು. ಈ ಬಾರಿ ಅದಕ್ಕೂ ಮುಂಚಿತವಾಗಿ ಬಾಗಿನ ಅರ್ಪಿಸುವುದು ತಮಗೆ ಅತೀವ ಸಂತಸ ಉಂಟುಮಾಡಿದೆ ಎಂದರಲ್ಲದೆ, ಕಳೆದ ಇಪ್ಪತ್ತು ದಿನಗಳ ಹಿಂದೆ ಕೇವಲ 79ಅಡಿ ನೀರು ಸಂಗ್ರಹವಾಗಿತ್ತು. ಇದರಿಂದ ಆತಂಕ ನಿರ್ಮಾಣವಾಗಿತ್ತು ಎಂದರು.
ಈಗ ಕಾವೇರಿ ತುಂಬಿ ತುಳುಕುತ್ತಿದ್ದು, ರೈತರ ಮೊಗದಲ್ಲಿ ಸಂತಸದ ಹೊನಲು ಹರಿದಿದೆ ಎಂದ ಅವರು, ತಾವು ಎರಡು ಬಾರಿ ಬಾಗಿನ ಅರ್ಪಿಸಿರುವುದು ತಮ್ಮ ಸೌಭಾಗ್ಯ ಎಂದು ತಿಳಿಸಿದರು. |