ರಾಜ್ಯದಲ್ಲಿ ನಡೆಯಲಿರುವ ಐದು ಕ್ಷೇತ್ರಗಳ ಉಪ ಚುನಾವಣೆಗಾಗಿ ಬಿಜೆಪಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ.
ಆಗೋಸ್ಟ್ 18ರಂದು ನಡೆಯಲಿರುವ ಚಿತ್ತಾಪುರ್ ವಿಧಾನಸಭಾ ಕ್ಷೇತ್ರಕ್ಕೆ ವಾಲ್ಮೀಕಿ ನಾಯಕ್, ಕೊಳ್ಳೇಗಾಲ-ಜಿ.ಎನ್.ನಂಜುಂಡಸ್ವಾಮಿ, ಗೋವಿಂದರಾಜ ನಗರ-ವಿ.ಸೋಮಣ್ಣ ಹಾಗೂ ಚನ್ನಪಟ್ಟಣ-ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಗಳೆಂದು ಹೆಸರಿಸಲಾಗಿದೆ.
ನವದೆಹಲಿಯಲ್ಲಿ ಶುಕ್ರವಾರ ಸಂಸದ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ರಾಮನಗರ ಕ್ಷೇತ್ರಕ್ಕೆ ಜು.27ರಂದು ಅಭ್ಯರ್ಥಿಯನ್ನು ಪ್ರಕಟಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಗುಲ್ಬರ್ಗಾ ಬಿಜೆಪಿ ಕಚೇರಿ ಧ್ವಂಸ: ಚಿತ್ತಾಪುರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಜಿ.ರಾಮಕೃಷ್ಣ ಅವರಿಗೆ ಟಿಕೆಟ್ ಸಿಗದಿದ್ದರಿಂದ ಹತಾಶೆಗೊಂಡ, ರಾಮಕೃಷ್ಣ ಅವರ ಬೆಂಬಲಿಗರು ಗುಲ್ಬರ್ಗಾ ಬಿಜೆಪಿ ಕಚೇರಿಯೊಳಗೆ ನುಗ್ಗಿ ದಾಂಧಲೆ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸದ ಘಟನೆ ನಡೆದಿದೆ.
ಚಿತ್ತಾಪುರ್ ಕ್ಷೇತ್ರದಿಂದ ತಾನು ಸ್ಪರ್ಧಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದೆ. ಆದರೆ ಕೊನೆ ಗಳಿಗೆಯಲ್ಲಿ ವಾಲ್ಮೀಕಿ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಜಿ.ರಾಮಕೃಷ್ಣ ದೂರಿದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ರಾಮಕೃಷ್ಣ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ರಾಮಕೃಷ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡ ಬೆಂಬಲಿಗರು ಕಚೇರಿಯೊಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. |