ರಾಜಕಾರಣಿಗಳ ಐಶಾರಾಮಿ ಜೀವನ, ದುಂದುವೆಚ್ಚವನ್ನು ಯಾವ ಪರಿಯಲ್ಲಿ ಮಾಡುತ್ತಾರೆ ಎಂಬುದಕ್ಕೆ ಇದೀಗ ಸ್ವತಃ ಮುಖ್ಯಮಂತ್ರಿಗಳೇ ಸಾಕ್ಷಿಯಾಗಿದ್ದಾರೆ. ಯಡಿಯೂರಪ್ಪ ಅವರ ರೇಸ್‌ಕೋರ್ಸ್ ರಸ್ತೆಯ ಮೊದಲ ಮಹಡಿಯ ಮಾಸ್ಟರ್ ಬೆಡ್‌ರೂಂ ಅಲಂಕಾರಕ್ಕೆ ವೆಚ್ಚವಾಗಿರುವ ಸರ್ಕಾರಿ ಹಣ ಸರಾಸರಿ 30ಲಕ್ಷ ರೂಪಾಯಿ!.ಇದು ಸೇರಿದಂತೆ ಮುಖ್ಯಮಂತ್ರಿಯವರು ವಾಸವಿರುವ ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ಒಟ್ಟು 21 ವಿವಿಧ ನವೀಕರಣ ಕಾಮಗಾರಿಗಾಗಿ 1.32ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸಿಎಂ ಹಾಗೂ ಸಚಿವರ ನಿವಾಸಗಳ ನವೀಕರಣದ ಕುರಿತು ಖರ್ಚು ವೆಚ್ಚದ ಕುರಿತು ಶುಕ್ರವಾರ ಸಚಿವ ಉದಾಸಿ ಮಾಹಿತಿ ಬಹಿರಂಗಪಡಿಸಿದರು.ಅಲ್ಲದೇ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಮುಖ್ಯಮಂತ್ರಿಯವರ ನಿವಾಸ ಸೇರಿ ಸಚಿವರ ನಿವಾಸಗಳ ನವೀಕರಣಕ್ಕೆ ಹಾಗೂ ದುರಸ್ತಿಗಾಗಿಯೇ ಸರ್ಕಾರಿ ಬೊಕ್ಕಸದಿಂದ 4.17ಕೋಟಿ ರೂಪಾಯಿಯಷ್ಟು ವ್ಯಯಿಸಿದೆ.ಈ ಪೈಕಿ ಅತಿ ಹೆಚ್ಚು ಹಣ ವೆಚ್ಚವಾಗಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ. ಮುಖ್ಯಮಂತ್ರಿಯವರು ಹಾಲಿ ವಾಸವಾಗಿರುವ ರೇಸ್‌ಕೋರ್ಸ್ ನಿವಾಸದ ನವೀಕರಣಕ್ಕೆ 1.32ಕೋಟಿ ರೂಪಾಯಿ ಹಾಗೂ ಅನುಗ್ರಹ ನಿವಾಸದ ನವೀಕರಣಕ್ಕೆ 56.45ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.ಜೆಡಿಎಸ್‌ನ ಸಾ.ರಾ.ಮಹೇಶ್ ಅವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಈ ವಿವರವನ್ನು ಸದನಕ್ಕೆ ಒದಗಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ, ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸ್ಪೀಕರ್ ಜಗದೀಶ್ ಶೆಟ್ಟರ್ ಹಾಗೂ 13ಸಚಿವರ ನಿವಾಸಗಳ ವೆಚ್ಚಕ್ಕಾಗಿ ಭಾರೀ ಮೊತ್ತ ವ್ಯಯಿಸಲಾಗಿದೆ. ಈ ಪೈಕಿ ಅತಿ ಕಡಿಮೆ ವೆಚ್ಚವಾಗಿರುವುದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ನಿವಾಸಕ್ಕೆ. |