ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡಿರುವ ಆರೋಪದ ಮೇಲೆ ಸಂಸದೆ, ಬಿಜೆಪಿಯ ಜೆ.ಶಾಂತಾ ಅವರಿಗೆ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿಗೆ ಆದೇಶಿಸಿದೆ.
ಚುನಾವಣಾ ಅಕ್ರಮ ಸೇರಿದಂತೆ ಅನೇಕ ರೀತಿಯ ಅವ್ಯವಹಾರ ಎಸಗಿರುವ ಆರೋಪ ಹೊತ್ತ ಇವರಿಗೆ ಕಳೆದ ವಾರವಷ್ಟೇ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಇದು ಎರಡನೆಯದ್ದಾಗಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗಣ್ಣ ಅವರು ಶಾಂತಾ ಅವರ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ ವಾಲ್ಮೀಕಿ ಜಾತಿ ಎಂದು ತಮ್ಮನ್ನು ಗುರುತಿಸಿ ಪರಿಶಿಷ್ಟ ವರ್ಗದಿಂದ ಶಾಂತಾ ಸ್ಪರ್ಧಿಸಿದ್ದಾರೆ. ಆದರೆ ಕೇಂದ್ರ ಸರ್ಕಾರಿ ದಾಖಲೆಯಲ್ಲಿ ವಾಲ್ಮೀಕಿ ಜಾತಿ ಇದೆಯೇ ವಿನಾ ಹಿಂದು ವಾಲ್ಮೀಕಿ ಜಾತಿ ನಮೂದಾಗಿರಲಿಲ್ಲ. ಅಷ್ಟೇ ಅಲ್ಲದೇ ನಿಯಮದ ಪ್ರಕಾರ ನಾಮಪತ್ರ ಸಲ್ಲಿಸುವ ಕನಿಷ್ಠ ಆರು ತಿಂಗಳು ಅದೇ ಊರಿನಲ್ಲಿ ನೆಲೆಸಿರಬೇಕು ಎಂದು ಇದೆ. ಆದರೆ ಶಾಂತಾ ಅವರು ನಾಮಪತ್ರ ಸಲ್ಲಿಸುವ ಮೂರು ತಿಂಗಳ ಹಿಂದೆ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಇದು ನಿಯಮ ಬಾಹಿರ ಎಂದು ಅರ್ಜಿಯಲ್ಲಿ ದೂರಲಾಗಿದೆ. |