ರಾಜ್ಯದಲ್ಲಿ ಕೆಲವರು ಪರಿಸರವಾದಿಗಳ ಹೆಸರಿನಲ್ಲಿ ಉದ್ದೇಶಿತ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ರಾಜ್ಯದ ಬಹುತೇಕ ವಿದ್ಯುತ್ ಬೇಡಿಕೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ದಿನದ 24ಗಂಟೆಯೂ ವಿದ್ಯುತ್ ಪೂರೈಕೆ ಮಾಡುವ ಚಿಂತನೆ ನಡೆಸಲಾಗಿದೆ ಎಂದೂ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯ ಮನೋಹರ ಮಸ್ಕಿ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಕೆಲವು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಈಶ್ವರಪ್ಪ, ಜಲ, ಪವನ, ಅನಿಲ ಆಧಾರಿತ ಮೂಲಗಳಿಂದ ವಿದ್ಯುತ್ ತಯಾರಿಕೆಗೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಕೆಲವಡೆ ಪರಿಸರವಾದಿಗಳು ಎಂದು ಹೇಳಿಕೊಂಡು ಕೆಲವರು ಈ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದರು. ಆದರೆ, ಸರ್ಕಾರ ಪರಿಸರ ಮತ್ತು ಅರಣ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹೇಳಿದರು. |