ಗಣಿಧಣಿಗಳ ವಿರುದ್ಧ ದಾಖಲಾಗಿದ್ದ 8 ಕ್ರಿಮಿನಲ್ ಪ್ರಕರಣ ಹಿಂಪಡೆದಿರುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ, ಚುನಾವಣೆ ಸಂದರ್ಭದಲ್ಲಿ ಸೋಲುವ ಭಯದಿಂದ ಪ್ರತಿಪಕ್ಷದವರು ದಾಖಲು ಮಾಡಿದ ಪ್ರಕರಣಗಳನ್ನು ಚುನಾವಣೆ ಗೆದ್ದ ಬಳಿಕ ಮುಂದುವರಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸದನದಲ್ಲಿ ಈ ಕುರಿತು ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಉತ್ತರಿಸಿದ ಸಚಿವರು, ಗಾಜಿನ ಮನೆಯಲ್ಲಿ ಕುಳಿತ ನೀವುಗಳ ನಮ್ಮ ಮೇಲೆ ಕಲ್ಲು ಎಸೆಯಲು ಪ್ರಯತ್ನ ಮಾಡುತ್ತಿದ್ದೀರಿ. ಅದು ನಿಮಗೇ ತಿರುಗುಬಾಣ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಎಂಟು ವರ್ಷಗಳಲ್ಲಿ ಸರ್ಕಾರ ಸುಮಾರು 955 ಪ್ರಕರಣಗಳನ್ನು ಹಿಂಪಡೆದಿದೆ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಒಂದೇ ವರ್ಷದಲ್ಲಿ 423 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದಾರೆ. ನೀವು ಮಾಡಿದ್ದು ಸರಿ, ನಾವು ಮಾಡಿದ್ದು ತಪ್ಪು ಎಂದು ವಾದಿಸುವ ಪ್ರಯತ್ನ ನೀವು ಮಾಡಬೇಡಿ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಕೆವಲ ಸಚಿವರು, ಆಡಳಿತ ಪಕ್ಷದ ಶಾಸಕರು ಮಾಡಿದ ಶಿಫಾರಸು ಮಾತ್ರವಲ್ಲದೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಅವರ ಶಿಫಾರಸುಗಳನ್ನು ಪುರಸ್ಕರಿಸಿಯೂ ಕೆಲವು ಪ್ರಕರಣ ಹಿಂಪಡೆಯಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು. |