ಮೈಸೂರಿನ ಕ್ಯಾತಮಾರನಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸರು ಶುಕ್ರವಾರ ರಾತ್ರಿ ಬೆಳಗಾವಿಯಲ್ಲಿ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿದ್ದು, ಮೈಸೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ ಜು.28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮಧ್ಯೆ, ಹಿಂದೂವಾದಿಗಳನ್ನು ಜೈಲಿಗೆ ತಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮುತಾಲಿಕ್ ಜೈಲಿನಲ್ಲಿ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.ಪ್ರಮೋದ್ ಮುತಾಲಿಕ್ ಅವರು ಮಾಡಿದ್ದ ಪ್ರಚೋದನಕಾರಿ ಭಾಷಣವೇ ಗಲಭೆಗೆ ಕಾರಣ ಎಂದು ಆರೋಪಿಸಿರುವ ಪೊಲೀಸರು ನಿನ್ನೆ ರಾತ್ರಿಯೇ ಹೆಚ್ಚಿನ ವಿಚಾರಣೆಗಾಗಿ ಬೆಳಗಾವಿಯಲ್ಲಿ ಅವರನ್ನು ಬಂಧಿಸಿದ್ದು, ಅವರನ್ನು ಇಂದು ಸಂಜೆ ಮೈಸೂರಿಗೆ ಕರೆ ತರಲಾಗಿತ್ತು.ಇಂದು ಸಂಜೆಗೆ ಅವರನ್ನು ಮೈಸೂರಿನ 2ನೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಮುತಾಲಿಕ್ ಅವರಿಗೆ ಜು.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕ್ಯಾತಮಾರನಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ಕೃಷ್ಣ ನೀಡಿದ ಮಾಹಿತಿ ಮೇರೆಗೆ ಮುತಾಲಿಕ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.ಇತ್ತೀಚೆಗೆ ಮೈಸೂರಿನ ಉದಯಗಿರಿ ಎಂಬಲ್ಲಿ ಮಸೀದಿ ಕಟ್ಟುವ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿ, ಘಟನೆಯಲ್ಲಿ ಇರಿತದಿಂದ ಇಬ್ಬರು, ಪೊಲೀಸ್ ಗೋಲಿಬಾರ್‌ಗೆ ಒಬ್ಬ ಬಲಿಯಾಗುವ ಮೂಲಕ ತೀವ್ರ ಹಿಂಸಾಚಾರ ನಡೆದಿತ್ತು.ಈ ಘಟನೆಗೂ 3 ತಿಂಗಳ ಮುನ್ನ ಕ್ಯಾತಮಾರನಹಳ್ಳಿಯಲ್ಲಿನ ದೇವಾಲಯಗಳ ಮೂರ್ತಿಗಳನ್ನು ಹಾಳುಗೆಡವಲಾಗಿತ್ತು. ಈ ಸಂದರ್ಭದಲ್ಲಿ ಒಂದು ವಾರಗಳ ಕಾಲ ನಿಷೇಧಾಜ್ಞೆ ಹೇರಲಾಗಿತ್ತು. ಘಟನೆಯ ನಂತರ ಮುತಾಲಿಕ್ ಅವರು ಕ್ಯಾತಮಾರನಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲದೇ ಘಟನೆ ಕುರಿತಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮತ್ತು ಸರ್ಕಾರ ವಿಫಲವಾಗಿರುವುದಾಗಿ ಆರೋಪಿಸಿ, ಇದಕ್ಕೆ ನಾವು ಕೂಡ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಚೋದನಾಕಾರಿ ಮಾತನ್ನು ಆಡಿದ್ದರು.ಮುತಾಲಿಕ್ ಆಮರಣಾಂತ ಉಪವಾಸ: ಹಿಂದೂವಾದಿಗಳನ್ನು ಜೈಲಿಗೆ ತಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಜೈಲಿನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. |