ರಾಜ್ಯದ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷರಾಗಿ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಶನಿವಾರ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಳೆದ 15 ವರ್ಷಗಳ ಜೆಡಿಎಸ್ ಪಾರುಪತ್ಯ ಅಂತ್ಯ ಕಂಡಂತಾಗಿದೆ.
ಜಿಲ್ಲಾ ಹಾಲು ಒಕ್ಕೂಟಗಳ ನಾಮ ನಿರ್ದೇಶನ ಪ್ರಕ್ರಿಯೆಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದ್ದರಿಂದ ಕೆಎಂಎಫ್ ಅಧ್ಯಕ್ಷರ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 8ಗಂಟೆಗೆ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಕೆಎಂಎಫ್ ಅಧ್ಯಕ್ಷಗಿರಿಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಈ ಸ್ಥಾನಕ್ಕೆ ಎಚ್.ಡಿ.ರೇವಣ್ಣ ಆಗಲಿ, ಬೇರೆ ಯಾರೂ ಸ್ಪರ್ಧಿಸದ ಕಾರಣ, ರೆಡ್ಡಿ ಅವರನ್ನು ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಿದೆ.
ಕೆಎಂಎಫ್ ಚುನಾವಣೆಯಲ್ಲಿ ಸೋಮಶೇಖರ ರೆಡ್ಡಿಯವರಿಗೆ ಬಿಜೆಪಿ ಬೆಂಬಲಿತ 10 ಮಂದಿ ಬೆಂಬಲ ಇದ್ದರೆ, ಮಾಜಿ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರಿಗೆ ಕೇವಲ 3ಮಂದಿ ಸದಸ್ಯರ ಬೆಂಬಲ ಮಾತ್ರ ಇದ್ದ ಹಿನ್ನೆಲೆಯಲ್ಲಿ, ರೇವಣ್ಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಒಟ್ಟಿನಲ್ಲಿ ಒಂದೂವರೆ ದಶಕಗಳ ಕಾಲಗಳ ಕೆಎಂಎಫ್ ನಡೆಸಿದ್ದ ಜೆಡಿಎಸ್ ಪಾರುಪತ್ಯ ಅಂತ್ಯ ಕಂಡಂತಾಗಿದ್ದು, ಕೆಎಂಎಫ್ ಅಧ್ಯಕ್ಷಗಾದಿ ಬಿಜೆಪಿ ತೆಕ್ಕೆಗೆ ಸೇರಿದೆ.
ಏತನ್ಮಧ್ಯೆ ಬಿಜೆಪಿ ರಾಜ್ಯ ಘಟಕದ ಹಾಲಿ ಅಧ್ಯಕ್ಷ, ಸಂಸದ ಡಿ.ವಿ.ಸದಾನಂದ ಗೌಡ(ಸಾಮಾನ್ಯ ಸ್ಥಾನ), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಆಗಿರುವ ಬಿಜಾಪುರ ಜಿಲ್ಲೆ ಮುದ್ದೇಬಿಹಾಳದ ಮಂಗಳಾದೇವಿ ಬಿರಾದಾರ (ಮಹಿಳಾ ಸ್ಥಾನ), ರಾಜ್ಯ ಬಿಜೆಪಿ ಉಪಾಧ್ಯಕ್ಷ ಇ.ಅಶ್ವತ್ಥ ನಾರಾಯಣ ಅವರನ್ನು ರಾಜ್ಯ ಸರ್ಕಾರ ಕೆಎಂಎಫ್ ನಾಮನಿರ್ದೇಶನ ಮಾಡಲು ತೀರ್ಮಾನಿಸಿದೆ. |