ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿರುವ ಶಾಸಕ ವರ್ತೂರ್ ಪ್ರಕಾಶ್, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ನಗರದ ತಹಸೀಲ್ದಾರ್ ರಂಗನಾಥ್ ಅವರು ಕುರುಬ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಕೊಡಲು ನಿರಾಕರಿಸಿರುವುದನ್ನು ಪ್ರತಿಭಟಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವರ್ತೂರ್ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿಗಾದಿಯನ್ನು ಅಲಂಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ದೇವೇಗೌಡರ ಕಾಲದಲ್ಲೂ ಕೂಡ ಕುರುಬ ಜನಾಂಗ ಹಾಗೂ ಕುರುಬ ಮುಖಂಡರಾದ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ಈಗ ಕೂಡ ಬಿಜೆಪಿ ಸರ್ಕಾರ ರೈತರನ್ನು ಮತ್ತು ಕುರುಬ ಜನಾಂಗವನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲು ಹೊರಟಿದೆ ಎಂದರು.
ರೈತ ವಿರೋಧಿಯಾಗಿರುವ ರಾಜ್ಯ ಬಿಜೆಪಿ ಸರ್ಕಾರ ಶೀಘ್ರವೇ ಪತನಗೊಳ್ಳಲಿದ್ದು,ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ತಹಸೀಲ್ದಾರ್ ರಂಗನಾಥ್ ಅವರನ್ನು ಭಾಲ್ಕಿ ತಾಲೂಕಿಗೆ ಸ್ವತಃ ಮುಖ್ಯಮಂತ್ರಿಗಳೇ ನೇಮಕ ಮಾಡಿದ್ದು, ತಾಲೂಕಿನ ಕುರುಬ ಜನಾಂಗದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಕೊಡದಂತೆ ನಿರ್ದೇಶನ ನೀಡಿದ್ದಾರೆಂದು ಗಂಭೀರವಾಗಿ ವರ್ತೂರ್ ಆರೋಪಿಸಿದರು. |