ಗುಲ್ಬರ್ಗಾ ನಗರ ಬಿಜೆಪಿ ಜಿಲ್ಲಾ ಕಚೇರಿಯನ್ನು ಧ್ವಂಸಗೊಳಿಸಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷಗಳ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.
ಕೆಎಂಎಫ್ ಚುನಾವಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರವಾದ ಗುಲ್ಬರ್ಗಾದಲ್ಲಿ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ವಿಜಯ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಈ ದುಷ್ಕೃತ್ಯವನ್ನು ನಡೆಸಿದೆ ಎಂದು ದೂರಿದ್ದಾರೆ.
ರಾಮಕೃಷ್ಣ ಅವರ ಬೆಂಬಲಿಗರು ಗುಲ್ಬರ್ಗಾ ಬಿಜೆಪಿ ಜಿಲ್ಲಾ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಮಕೃಷ್ಣ ಅವರು ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದರು ಎಂದು ತಿಳಿಸಿದ ಅವರು, ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಪ್ರಕರಣದ ನಿಜಾಂಶ ಶೀಘ್ರವೇ ತಿಳಿಯಲಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸಲಿದ್ದರು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. |