ಎರಡು ದಶಕಗಳಿಗೂ ಹಳೆಯದಾದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಬಗೆಹರಿಸಲು ರಾಜ್ಯ ಸರಕಾರ ವಿಫಲವಾದ ಹಿನ್ನಲೆಯಲ್ಲಿ ವಿವಾದ ಮತ್ತೆ ಸುಪ್ರಿಂ ಕೋರ್ಟ್ ಮೆಟ್ಟಲೇರಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಬಾರಿ ಬಿಜೆಪಿ ಸರ್ಕಾರ ಉಭಯ ಬಣಗಳ ನಡುವೆ ಸಂಧಾನಕ್ಕೆ ಯತ್ನಿಸಿದರೂ, ಅದು ವಿಫಲವಾಗಿದ್ದರಿಂದ ಅಂತಿಮವಾಗಿ ಸುಪ್ರಿಂಕೋರ್ಟ್ ಬಾಗಿಲು ತಟ್ಟಿದ್ದು, ಮುಂದಿನ ತಿಂಗಳ 4ರಂದು ಅಂತಿಮ ವಿಚಾರಣೆ ನಂತರ ಪರಿಹಾರ ಸಿಗಬೇಕಾಗಿದೆ.
ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ, ಸಂಧಾನ ಪ್ರಕ್ರಿಯೆಗೆ ಕಾಲಾವಕಾಶ ನೀಡುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಯಾರೂ ಮನವಿ ಮಾಡಿಲ್ಲ. ಜತೆಗೆ ಎರಡೂ ಬಣಗಳು ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಕುರಿತು ಸುಪ್ರಿಂಕೋರ್ಟ್ನಲ್ಲಿ ಮಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನ ಹಕ್ಕು ಮತ್ತು ಸ್ವತ್ತಿನ ವಿವಾದಕ್ಕೆ ಆರು ಮಂದಿ ಬಲಿಯಾಗಿದ್ದರು. ಈ ಪ್ರಕರಣ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ದಾಟಿ ಸುಪ್ರಿಂ ಕೋರ್ಟಿಗೆ ಹೋಗಿತ್ತು.
ಇದು ತುಂಬಾ ಭಾವನಾತ್ಮಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ್ದು, ಉಭಯ ಧರ್ಮೀಯರನ್ನು ಒಗ್ಗೂಡಿಸಿ ಯಾರಿಗೂ ನೋವು ಆಗದ ರೀತಿಯಲ್ಲಿ ಪರಸ್ಪರ ಮಾತುಕತೆ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಸುಪ್ರಿಂಕೋರ್ಟ್ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು.
ಆದರೆ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದ್ದರಿಂದ ಪ್ರಕರಣ ಮತ್ತೆ ಸರ್ವೋಚ್ಚ ನ್ಯಾಯಲಯಕ್ಕೆ ತೆರಳಿದೆ.
|