ಇಸ್ಲಾಮಿಕ್ ಉಗ್ರಗಾಮಿಗಳ ಕಾಟ ಆಯಿತು. ಈಗ ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿಗಳು ದಕ್ಷಿಣದ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕ, ಅದರಲ್ಲಿಯೂ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವುದು ಸ್ಥಳೀಯ ಪೊಲೀಸರಿಗೆ ನುಂಗಲಾರದ ತುತ್ತಾಗುತ್ತಿದೆ.ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪಡೆಗಳಿಂದ ಒತ್ತಡ ಸಹಿಸಲಾರದೆ ಈ ಪ್ರತ್ಯೇಕತಾವಾದಿ ಉಗ್ರರು ದಕ್ಷಿಣಕ್ಕೆ ಓಡೋಡಿ ಬರುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳುತ್ತವೆ. ಅಸ್ಸಾಂನಲ್ಲಿನ ನಿಷೇಧಿತ ಉಗ್ರಗಾಮಿ ಗಂಪುಗಳಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ)ಗಳು ದಕ್ಷಿಣ ಭಾರತೀಯ ನಗರಗಳನ್ನು ನಮ್ಮ ಕಾರಸ್ಥಾನವನ್ನಾಗಿ ಮಾಡಿಕೊಳ್ಳತೊಡಗಿವೆ.ಈ ಆತಂಕದ ಬೆಂಕಿಗೆ ತುಪ್ಪ ಸುರಿಯಲೋ ಎಂಬಂತೆ, ಇತ್ತೀಚೆಗೆ ಬೆಂಗಳೂರಿನಲ್ಲಿ ಈಶಾನ್ಯದ ಉಗ್ರರು ಸೆರೆ ಸಿಕ್ಕಿರುವುದು ಇಲ್ಲಿ ಗಮನಾರ್ಹ. ನಿಷೇಧಿತ ಬ್ಲ್ಯಾಕ್ ವಿಡೋ ಎಂಬ ಬಂಡುಕೋರ ಸಂಘಟನೆಯ ಮುಖ್ಯ ಕಮಾಂಡರ್ ಜೆವೆಲ್ ಗಾರ್ಲೋಸಾ ಸೇರಿದಂತೆ ಇಬ್ಬರನ್ನು ಕಳೆದ ತಿಂಗಳು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಗಾರ್ಲೋಸಾ ಕಾಠ್ಮಂಡು ಮೂಲಕ ಬೆಂಗಳೂರಿಗೆ ನುಸುಳಿಕೊಂಡಿದ್ದ. ಅದೇ ರೀತಿ ಈ ತಿಂಗಳಾರಂಭದಲ್ಲಿ ಪೊಲೀಸರು ಮಣಿಪುರದ ಪೀಪಲ್ಸ್ ಯುನೈಟೆಡ್ ಲಿಬರೇಶನ್ ಫ್ರಂಟ್ (ಪಿಯುಎಲ್ಎಫ್) ನಾಯಕ ರೋಶನ್ ಅಲಿ ಆಲಿಯಾಸ್ ಅನೀಸ್ ಎಂಬಾತನನ್ನು ಬೆಂಗಳೂರಿನ ಮಹಾದೇವಪುರ ಸಮೀಪದ ಸಿಂಗನಪಾಳ್ಯದಲ್ಲಿ ಬಂಧಿಸಿದ್ದರು. ಕಳೆದ ವರ್ಷವೇ ಬೆಂಗಳೂರಿಗೆ ನುಸುಳಿದ್ದ ಈತ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡತೊಡಗಿದ್ದ. ಪಿಯುಎಲ್ಎಫ್ ಎಂಬುದು ಮಣಿಪುರದ ಮುಸ್ಲಿಂ ಬಂಡುಕೋರ ಸಂಘಟನೆಯಾಗಿದೆ.ಕಳೆದ ವರ್ಷ, ಮಣಿಪುರದ ನಿಷೇಧಿತ ಪೀಪಲ್ಸ್ ರೆವಲ್ಯುಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಪಿಆರ್ಇಪಿಎಕೆ) ಸಂಘಟನೆಯ ಮೂವರು ಉಗ್ರಗಾಮಿಗಳು ಹಾಗೂ ಅವರ ಮೂವರು ಸಹಚರರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಕಗ್ಗದಾಸಪುರದ ಬಾಡಿಗೆ ಮನೆಯೊಂದರಿಂದ ಮೂರು ಉಗ್ರರನ್ನು ಬಂಧಿಸಿದ್ದರೆ, ಅವರ ಸಹಚರರು ಮಹಾದೇವಪುರ ಪ್ರದೇಶದಲ್ಲಿ ಸೆರೆ ಸಿಕ್ಕಿದ್ದರು.ಉಲ್ಫಾ ಮತ್ತು ಎನ್‌ಡಿಎಫ್‌ಬಿಯ ಹಿರಿಯ ಮತ್ತು ಮಧ್ಯಮ ಹಂತದ ನಾಯಕರು ದಕ್ಷಿಣ ಭಾರತದಲ್ಲಿ ಆಶ್ರಯ ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎನ್ನುತ್ತಾರೆ ಅಸ್ಸಾಂ ಪೊಲೀಸ್ ಮುಖ್ಯಸ್ಥ ಜಿ.ಎಂ.ಶ್ರೀವಾಸ್ತವ.ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪಡೆಗಳು ಬಿಸಿ ಹೆಚ್ಚಿಸಿದಾಗ, ತಂಪು ಮಾಡಿಕೊಳ್ಳಲೆಂದು ಆಶ್ರಯವರಸಿ ಈ ಉಗ್ರಗಾಮಿಗಳು ಬೆಂಗಳೂರು ನುಸುಳುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಅವರು ಹೈದರಾಬಾದ್, ಚೆನ್ನೈನತ್ತಲೂ ದೃಷ್ಟಿ ಹರಿಸುತ್ತಿದ್ದಾರೆ ಎಂಬ ಬಗ್ಗೆ ಗುಪ್ತಚರ ದಳಗಳಿಗೆ ಮಾಹಿತಿ ಲಭ್ಯವಾಗಿದೆ.ಹಲವಾರು ಸಮಸ್ಯೆಗಳ ನಡುವೆ ಆಡಳಿತದಲ್ಲಿ ಮುಳುಗಿರುವ ಸರಕಾರಕ್ಕೆ ಇದೊಂದು ಸಂಗತಿಯ ಮೇಲೆ ಗಮನ ಹರಿಸಲು ಸಮಯ ದೊರೆಯದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. |