ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವ ಹಾಲಪ್ಪ ಅವರು ಭಾನುವಾರ ಬಂಕಾಪುರ ಚೌಕ ಸಮೀಪದ ಇಸ್ಲಾಮಪುರ ಮುಖ್ಯರಸ್ತೆಯಲ್ಲಿನ ಗೋದಾಮಿನ ಮೇಲೆ ದಿಢೀರ್ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಅವರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಇರಲಿಲ್ಲವಾಗಿತ್ತು. ಕೆಲ ಸಮಯದ ನಂತರ ಅವರು ಆಗಮಿಸಿದರು. ಸುಮಾರು 60ಲಕ್ಷ ರೂಪಾಯಿ ಬೆಲೆಯ 3056ಕ್ವಿಂಟಾಲ್ ಅಕ್ಕಿ, 26ಕ್ವಿಂಟಾಲ್ ಗೋಧಿ, ಒಂದು ಲಾರಿ, ಮೂರು ತೂಕದ ಯಂತ್ರ, ಎರಡು ಹೊಲಿಗೆ ಯಂತ್ರ ಹಾಗೂ ಒಂದು ಸೈಕಲ್ಲನ್ನು ಗೋದಾಮಿನಿಂದ ವಶಪಡಿಸಿಕೊಳ್ಳಲಾಗಿದೆ.
ಶಿವಾ ಟ್ರೇಡಿಂಗ್ ಹೆಸರಿನ ಅಂಗಡಿಯ ಮಾಲೀಕರಾಗಿರುವ ಅಶೋಕ ತಿಳವಳ್ಳಿ ಎಂಬುವರಿಗೆ ಈ ಗೋದಾಮು ಸೇರಿದೆ. ವಶಪಡಿಸಿಕೊಳ್ಳಲಾದ ದಾಸ್ತಾನಿನಲ್ಲಿ ಭಾರತೀಯ ಆಹಾರ ನಿಗಮದ ಅಕ್ಕಿಯೂ ಸೇರಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ತಿಳಿಸಿದ್ದಾರೆ.
ಭಾರತೀಯ ಆಹಾರ ನಿಗಮದಿಂದ ಪಡೆದುಕೊಂಡ ಈ ಸರ್ಕಾರಿ ಅಕ್ಕಿಯನ್ನು ಲೋಟಸ್ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಶಂಕೆ ಇದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು. ಅಕ್ರಮ ಅಕ್ಕಿ ದಾಸ್ತಾನು ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ದರ್ಪಣ ಜೈನ್, ತಹಸೀಲ್ದಾರ್ ಬಿರಾದಾರ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. |