ನೈಸ್ ರಸ್ತೆ ನಿರ್ಮಾಣ ಯೋಜನೆ ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಯಾವುದೇ ರಾಜಕಾರಣಿಯಿಂದಲೂ ಈ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಮತ್ತೆ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಆದಿಚುಂಚನಗಿರಿ ಮಹಾಸಂಸ್ಥಾನಮಠ ಮತ್ತು ಕೆಂಗಲ್ ಹನುಮಂತಯ್ಯ ಹಾಸ್ಟೆಲ್ ಟ್ರಸ್ಟ್ ಆಯೋಜಿಸಿದ್ದ ಬಿಜಿಎಸ್ ಮಹಿಳಾ ವಿದ್ಯಾರ್ಥಿ ನಿಲಯ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನೈಸ್ ಯೋಜನೆಯ ವ್ಯಾಪ್ತಿಯಲ್ಲಿ ತಮ್ಮ ಮಗ ಹಾಗೂ ಪತ್ನಿಯ ಜಮೀನು ಇರುವುದರಿಂದ ಯೋಜನೆಯ ಮಾರ್ಗ ಬದಲಿಸುವಂತೆ ಸೂಚಿಸಿದ್ದರು. ಅದಕ್ಕೆ ನಿರಾಕರಿಸಿದ್ದರಿಂದ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಗೌಡರ ಹೆಸರನ್ನು ಉಲ್ಲೇಖಿಸಿದೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಕಾರಿಡಾರ್ ನಿರ್ಮಿಸಲು ವಶಪಡಿಸಿಕೊಂಡಿರುವ ಜಮೀನಿನ ಮೌಲ್ಯ ಎಕರೆಗೆ 60ಸಾವಿರವಿದ್ದರೆ, ಕಂಪೆನಿ 6ಲಕ್ಷ ರೂಪಾಯಿಗಳನ್ನು ನೀಡಿದೆ. ಇದರಿಂದ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಮಾರಾಟ ಮಾಡಿದ್ದಾರೆ. ಯೋಜನೆಗೆ 20ಸಾವಿರ ಎಕರೆ ಸಾಕಿತ್ತು. ಆದರೆ, ರೈತರೇ ಸ್ವಯಂ ಆಗಿ ಜಮೀನು ಮಾರಾಟ ಮಾಡಿದ್ದರಿಂದ 40 ರಿಂದ 50ಸಾವಿರ ಎಕರೆ ಖರೀದಿಸಬೇಕಾಯಿತು ಎಂದು ವಿವರಿಸಿದರು.
ತಮಗೆ ನೈಸ್ ಮುಖ್ಯವಲ್ಲ, ಈ ಯೋಜನೆಯನ್ನು ಹೇಗೆ ಪೂರ್ಣಗೊಳಿಸುತ್ತೇನೆ ಎಂಬುದು ತಮಗೆ ಮುಖ್ಯ ಎಂದು ಖೇಣಿ ಈ ಸಂದರ್ಭದಲ್ಲಿ ಹೇಳಿದರು. |