ಹಲಸೂರಿನ ಜೋಡಿ ಕೊಲೆ ಪ್ರಕರಣ ಇನ್ನೂ ಹಸಿ ಇರುವಾಗಲೇ ರೌಡಿಗಳ ಮಾರಾಮಾರಿಯಲ್ಲಿ ಪ್ರಮುಖ ರೌಡಿ ಶೀಟರ್ ಬುಲೆಟ್ ರವಿ (40ವ) ಹಾಗೂ ಆತನ ಸಹಚರ ಸೀನ (35) ಎಂಬಾತನನ್ನು ಸೋಮವಾರ ಯಲಹಂಕ ನ್ಯೂ ಟೌನ್ ಸಮೀಪ ತಲವಾರಿನಿಂದ ಕೊಚ್ಚಿ ಹತ್ಯೆಗೈದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಏಕಾಏಕಿ ಉದ್ಯಾನನಗರಿಯ ಯಲಹಂಕ ನ್ಯೂಟೌನ್ ಶೇಷಾದ್ರಿಪುರಂ ಕಾಲೇಜ್ ಬಳಿ ಇರುವ ಫಿಟ್‌ನೆಸ್ ವರ್ಲ್ಡ್ ಜಿಮ್‌ನಲ್ಲಿ ಭೂಗತ ಪಾತಕಿಗಳ ತಂಡ ಮಾರಾಮಾರಿಗೆ ಇಳಿದಿದ್ದು, ಈ ಸಂದರ್ಭದಲ್ಲಿ ಪ್ರಮುಖ ರೌಡಿಯಾದ ಬುಲೆಟ್ ರವಿಯನ್ನು ಹಾಗೂ ಆತನ ಸಹಚರ ಸೀನನ್ನು ಹತ್ಯೆಗೈದಿದ್ದಾರೆ. ಮತ್ತೊಬ್ಬ ಸಹಚರ ವಾಸು ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದಾಗ ಸೀನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಬುಲೆಟ್ ರವಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಗಾಯಾಳು ವಾಸು ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ಸ್ಥಳದಲ್ಲಿ ಮತ್ತು ಕೊಲಂಬಿಯಾ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಭೂಗತಲೋಕದ ಹಳೇ ವೈಷಮ್ಯವೇ ಈ ಕೊಲೆಗೆ ಕಾರಣವಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಬುಲೆಟ್ ರವಿ ಸೇರಿದಂತೆ ಆತನ ಗ್ಯಾಂಗ್‌ನವರು ಕೊಲೆ, ಸುಲಿಗೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಇಲಾಖೆಯ ವಾಟೆಂಡ್ ಲಿಸ್ಟ್‌ನಲ್ಲಿದ್ದವರು ಎಂದು ಪೊಲೀಸರು ವಿವರಿಸಿದ್ದಾರೆ.