ಆರ್ಎಸ್ಎಸ್ ಮುಸ್ಲಿಂ ವಿರೋಧಿಯಲ್ಲ: ಮುಮ್ತಾಜ್ ಅಲಿಖಾನ್
ದೇಶದಲ್ಲಿ ನಡೆದ ರಕ್ತಪಾತಕ್ಕೆ ಆರ್ಎಸ್ಎಸ್ ಕಾರಣವೇ?
ಬೆಂಗಳೂರು, ಸೋಮವಾರ, 27 ಜುಲೈ 2009( 19:29 IST )
ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ಏಕೈಕ ಉದ್ದೇಶದಿಂದ ಕೆಲವರು, ಆರ್‌ಎಸ್‌ಎಸ್ ಬಗ್ಗೆ ತೀವ್ರ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ವಕ್ಫ್ ಸಚಿವ ಡಾ.ಮುಮ್ತಾಜ್ ಅಲಿಖಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇವಲ ರಾಜಕೀಯ ಲಾಭಕ್ಕಾಗಿ ಇಂಥ ಪ್ರಯತ್ನಗಳು ನಡೆಯುತ್ತಿದ್ದು, ಅಲ್ಪಸಂಖ್ಯಾತರ ಮತಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರನ್ನು ದುರುಪಯೋಗಪಡಿಸಿಕೊಳ್ಳುವವರು ಹಿಂದು ಬಂಧುಗಳೇ ಹೊರತು ಬೇರಾರು ಅಲ್ಲ ಎಂದಿರುವ ಅವರು, ಆರ್ಎಸ್‌ಎಸ್ ಯಾವತ್ತು ಯಾವ ಅಲ್ಪಸಂಖ್ಯಾತರಿಗೆ ತೊಂದರೆ ಕೊಟ್ಟಿದೆ ಎಂಬುದರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರು ಖಚಿತಪಡಿಸಲಿ ಎಂದು ಸವಾಲು ಹಾಕಿದರು.
ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಸೃಷ್ಟಿ ಮಾಡಲು ವಿರೋಧಿಸಿದ್ದು ಸೇರಿದಂತೆ ದೇಶದಲ್ಲಿ ನಡೆದ ರಕ್ತಪಾತಗಳಿಗೆಲ್ಲ ಆರ್‌ಎಸ್‌ಎಸ್ ಕಾರಣವೇ? ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ.
ಆರ್‌ಎಸ್ಎಸ್ ಮುಖ್ಯ ಗುರಿ ಮತ್ತು ಉದ್ದೇಶ ಕೇವಲ ರಾಷ್ಟ್ರೀಯತೆಯನ್ನು ಕಾಪಾಡುವುದಾಗಿದೆ ಎಂದಿರುವ ಖಾನ್, ಆಮಿಷ ಒಡ್ಡಿ ಮತಾಂತರ ಮಾಡಿಸುವುದನ್ನು ತಡೆಯುವ ಮೂಲಕ, ಭಾರತೀಯ ಗತವೈಭವವನ್ನು ರಕ್ಷಿಸುವಲ್ಲಿ ಅದು ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥರಾಗಿದ್ದ ಗುರೂಜಿ ಗೋಲ್ವಾಲ್ಕರ್ ಅವರು ಇಸ್ಲಾಂ ಧರ್ಮವನ್ನು ಮತ್ತು ಪ್ರವಾದಿ ಮೊಹ್ಮದ್ ಅವರನ್ನು ಹೊಗಳಿದ್ದಾರೆಂದು ಹೇಳಿರುವ ಅವರು, ಹಿಂದಿನ ಕಾಲದಲ್ಲಿ ಮುಸ್ಲಿಂ ಬುದ್ಧಿಜೀವಿಗಳು ಹಾಗೂ ಬಡವರೊಡನೆ ಹಿಂದೂಗಳು ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ವಿವರಿಸಿದ್ದಾರೆ.