ವಿಧಾನಸಭಾ ಉಪಚುನಾವಣೆಯಲ್ಲಿ ಮೂರೇ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿಕೊಂಡಿದ್ದ ಜೆಡಿಎಸ್ ಇದೀಗ ಎಲ್ಲಾ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದೆ. ರಾಮನಗರದ ಅಭ್ಯರ್ಥಿ ಯಾರೆಂದು ಘೋಷಿಸದೆ ಇನ್ನೂ ಪಟ್ಟು ಹಿಡಿದು ಕೂತಿರುವ ಪ್ರಮುಖ ಪಕ್ಷಗಳು ಯಾರಾದರೂ ಮೊದಲು ಪ್ರಕಟಿಸಲಿ ಎಂದು ಕಾಯುತ್ತಿವೆ.
ಗೋವಿಂದರಾಜ ನಗರದಿಂದ ರಂಗೇ ಗೌಡ, ಚನ್ನಪಟ್ಟಣದಿಂದ ಅಶ್ವಥ್, ಕೊಳ್ಳೇಗಾಲದಿಂದ ಎಸ್. ಬಾಲರಾಜ್, ಚಿತ್ತಾಪುರದಿಂದ ಬಸವರಾಜ್ ಬೆಲ್ಲೂರು ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಆದರೆ ರಾಮನಗರದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಕಂಡು ಬಂದಿಲ್ಲ. ಮೂಲಗಳ ಪ್ರಕಾರ ರಾಜು ಅಥವಾ ಮರಿಲಿಂಗೇ ಗೌಡರಿಬ್ಬರೊಳಗೆ ಒಬ್ಬರನ್ನು ಕಣಕ್ಕಿಳಿಸಬಹುದು.
ಈ ಮೊದಲು ಜೆಡಿಎಸ್ ಚಿತ್ತಾಪುರ ಹಾಗೂ ಕೊಳ್ಳೇಗಾಲದಿಂದ ಸ್ಪರ್ಧಿಸದೇ ಇರಲು ನಿರ್ಧರಿಸಿತ್ತು. ಇದೀಗ ಮನಸ್ಸು ಬದಲಾಯಿಸಿರುವ ವರಿಷ್ಠ ದೇವೇಗೌಡರು ಇಲ್ಲೂ ಸ್ಪರ್ಧೆಗಿಳಿಸುವ ತೀರ್ಮಾನ ಕೈಗೊಂಡಿದ್ದಾರೆ. ಗುಲ್ಬರ್ಗ ಜಿಲ್ಲಾ ಪಂಚಾಯತ್ ಸದಸ್ಯ ಬೆಲ್ಲೂರ್‌ರವರಿಗೆ ಚಿತ್ತಾಪುರದಿಂದ ಹಾಗೂ ಮಾಜಿ ಶಾಸಕ ಬಾಲರಾಜ್‌ರಿಗೆ ಕೊಳ್ಳೇಗಾಲದಿಂದ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಅತ್ತ ಕಾಂಗ್ರೆಸ್ ಕೂಡ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಕಾಯುತ್ತಿದೆ. ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ, ಗೋವಿಂದರಾಜ ನಗರದಿಂದ ಪ್ರಿಯಾ ಕೃಷ್ಣ, ಕೊಳ್ಳೇಗಾಲದಿಂದ ಜಯಣ್ಣ ಹಾಗೂ ಚನ್ನಪಟ್ಟಣದಿಂದ ಟಿ.ಕೆ. ಯೋಗೇಶ್‌ರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಮೂಲಗಳ ಪ್ರಕಾರ ರಾಮನಗರದಿಂದ ಸಿ.ಎಂ. ಲಿಂಗಪ್ಪ ಅವರನ್ನು ಕಣಕ್ಕಿಳಿಸಲಿದೆ.
ಆಡಳಿತ ಪಕ್ಷ ಬಿಜೆಪಿಯು ಗೋವಿಂದರಾಜ ನಗರದಿಂದ ವಿ. ಸೋಮಣ್ಣ, ಚನ್ನಪಟ್ಟಣದಿಂದ, ಸಿ.ಪಿ. ಯೋಗೇಶ್ವರ್, ಕೊಳ್ಳೇಗಾಲದಿಂದ ಜಿ.ಎನ್. ನಂಜುಂಡ ಸ್ವಾಮಿ ಹಾಗೂ ಚಿತ್ತಾಪುರದಿಂದ ವಾಲ್ಮೀಕಿ ನಾಯಕರನ್ನು ಕಣಕ್ಕಿಳಿಸಲಿದೆ. ರಾಮನಗರದಿಂದ ಬಿಜೆಪಿ ಪಟ್ಟಿಯಲ್ಲಿ ನಟಿ ಸರೋಜಾದೇವಿಯವರೇ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಕಾರಣ ತೆರವಾಗಿದ್ದ ರಾಮನಗರ ಕ್ಷೇತ್ರ ಈ ಬಾರಿಯ ಉಪಚುನಾವಣೆಯಲ್ಲಿ ಕೇಂದ್ರ ಬಿಂದು. ಎಲ್ಲಾ ಪಕ್ಷಗಳಿಗೂ ಇದು ಪ್ರತಿಷ್ಠೆಯ ಪ್ರಶ್ನೆ.
ಆರಂಭದಲ್ಲಿ ಎಚ್.ಡಿ. ರೇವಣ್ಣ ಪತ್ನಿ ಭವಾನಿಯವರನ್ನು ರಾಮನಗರದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ ನಂತರ ನಿರ್ಧಾರ ಬದಲಾಯಿಸಲಾಗಿತ್ತು. ಆದರೂ ಕ್ಷೇತ್ರದ ಮತದಾರರು ಜೆಡಿಎಸ್ ಕೈ ಬಿಡುವುದಿಲ್ಲ ಎಂಬ ಭರವಸೆ ಮಾಜಿ ಪ್ರಧಾನಿ ದೇವೇಗೌಡರದ್ದು. ಕುಮಾರಸ್ವಾಮಿಯವರು ಕೂಡ ಈ ಕ್ಷೇತ್ರದ ಮೇಲೆ ಅಪಾರ ಭರವಸೆಯನ್ನಿಟ್ಟುಕೊಂಡಿದ್ದಾರೆ.