ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿರುವುದಕ್ಕೆ ಆಡಳಿತಾರೂಢ ಬಿಜೆಪಿ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಂಧನದ ಮೂಲಕ ಮುತಾಲಿಕ್ ಅವರ ಹೋರಾಟದ ಹಾದಿಯನ್ನು ಹತ್ತಿಕ್ಕಲು ಹೊರಟಿರುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಿಜೆಪಿ ಶಾಸಕರು, ಮುತಾಲಿಕ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆನ್ನಲಾಗಿದೆ. ಹಲವು ಹೋರಾಟಗಳಲ್ಲಿ ತಮ್ಮ ನಿಲುವು ಮತ್ತು ಮುತಾಲಿಕ್ ಅವರ ನಿಲುವು ಒಂದೇ ರೀತಿಯದಾಗಿತ್ತು. ಅವರ ಭಾಷಣದಿಂದಲೇ ಕೋಮು ಪ್ರಚೋದನೆ ಉಂಟಾಗಿದೆ ಎಂಬುದು ಸರಿಯಲ್ಲ. ಕೋಮುಗಲಭೆಗೆ ಅವರ ಭಾಷಣ ಕಾರಣವಲ್ಲ ಎಂದು ಬಿಜೆಪಿ ಶಾಸಕರು ಹೇಳಿದರು ಎಂದು ಕೆಲವು ಮೂಲಗಳು ತಿಳಿಸಿವೆ.
ಆದರೆ ಯಡಿಯೂರಪ್ಪ ಅವರು ಮುತಾಲಿಕ್ ಬಿಡುಗಡೆಗೆ ಆಸಕ್ತಿ ತೋರಿಸಿಲ್ಲ ಎಂದು ಹೇಳಲಾಗಿದ್ದು, ಬಿಜೆಪಿ ಶಾಸಕರು ಸಂಘ ಪರಿವಾರದ ಮುಖ್ಯಸ್ಥರೊಡನೆ ಈ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.