ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ಮೇಲೆ ಬಂಧಿತನಾಗಿದ್ದ ವಿನಿವಿಂಕ್ ಶ್ರೀನಿವಾಸ ಶಾಸ್ತ್ರಿಯನ್ನು ಸೋಮವಾರ ರಾತ್ರಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ತಿಂಗಳ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿ, ಈ ಬಿಡುಗಡೆಯಿಂದ ಮರು ಜನ್ಮ ಪಡೆದಂತಾಗಿದೆ. ನನ್ನ ಮೊದಲ ಆದ್ಯತೆ ಠೇವಣಿದಾರರಿಗೆ ಹಣ ವಾಪಸ್ ಕೊಡುವುದಾಗಿದೆ. ಉಳಿದ ವಿಚಾರಗಳನ್ನು ನಂತರ ಬಹಿರಂಗಗೊಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸ್ತ್ರಿ ಪರ ವಕೀಲ ಶಂಕರಪ್ಪ ಹಾಜರಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿತ್ತು.
200ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಶಾಸ್ತ್ರಿ ಜೈಲಿನಲ್ಲಿಯೇ ಇದ್ದು, ಜಾಮೀನು ಅರ್ಜಿಯನ್ನು ಈ ಮೊದಲು ಹೈಕೋರ್ಟ್ ತಿರಸ್ಕರಿಸಿತ್ತು. ನಂತರ ಸುಪ್ರೀಂಕೋರ್ಟ್ ಮೊರೆ ಹೋದ ಶಾಸ್ತ್ರಿಗೆ ಜುಲೈ 14ರಂದು ಮಧ್ಯಂತರ ಜಾಮೀನು ನೀಡಿತ್ತು. ಸುಪ್ರೀಂ ಜಾಮೀನಿನ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಶಾಸ್ತ್ರಿಯ ವಿನಿವಿಂಕ್ ಸಂಸ್ಥೆಯಿಂದ ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು, ತುಮಕೂರು ಹಾಗೂ ರಾಯಚೂರು ಜಿಲ್ಲೆಗಳಲ್ಲಿನ ಜನರು ವಂಚನೆಗೊಳಗಾಗಿದ್ದು, ಸುಮಾರು 14ಮೊಕದ್ದಮೆ ದಾಖಲಾಗಿತ್ತು. ಸಂಸ್ಥೆ ಸಂಪೂರ್ಣ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಶಾಸ್ತ್ರಿ ನಾಪತ್ತೆಯಾಗಿದ್ದ. ನಂತರ 2005 ಅಕ್ಟೋಬರ್ 28ರಂದು ವಿಶಾಖಪಟ್ಟಣಂನಲ್ಲಿ ಶಾಸ್ತ್ರಿಯನ್ನು ಬಂಧಿಸಲಾಗಿತ್ತು.