ದೇವೇಗೌಡರ ಕುಟುಂಬ ವಂಶರಾಜಕಾರಣ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ನನ್ನ ಕುಟುಂಬದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸುವ ಮೂಲಕ ಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪದಿಂದ ದೂರ ಸರಿಯುವ ಯತ್ನಕ್ಕೆ ಮುಂದಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 18ರಂದು ನಡೆಯಲಿರುವ ಐದು ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.
ತಾಲೂಕು ರಾಜಕಾರಣದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಲ್ಪಸ್ವಲ್ಪ ಇದ್ದ ಭಿನ್ನಾಭಿಪ್ರಾಯ ಸರಿಪಡಿಸಿದ್ದೇನೆ. ಈ ಬಾರಿ ಅಶ್ವಥ್ ಗೆಲ್ಲುವುದು ಖಚಿತ. ರಾಜ್ಯದಲ್ಲಿನ ಐದು ಕ್ಷೇತ್ರಗಳಲ್ಲೂ ಜೆಡಿಎಸ್ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬೋರ್ವೆಲ್ ರಾಮಚಂದ್ರು ಅವರಿಗೆ ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ವಾಪಸ್ ಪಡೆದು ಅಶ್ವಥ್ ಗೆಲುವಿಗೆ ದುಡಿಯುವಂತೆ ಅವರು ಸಲಹೆ ನೀಡಿದರು.