ದೇಶದ ಬೆನ್ನೆಲುಬು ರೈತ. ಆದರೂ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರಲ್ಲಿ ರೈತರ ಸಂಖ್ಯೆಯೇ ಹೆಚ್ಚಿನದು ಎಂದು ಖ್ಯಾತ ಪರಿಸರ ಹೋರಾಟಗಾರ್ತಿ ಡಾ.ವಂದನಾ ಶಿವ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಸೋಮವಾರ ಕ್ರಾಫರ್ಡ್ ಭವನದಲ್ಲಿ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ, 'ಭವಿಷ್ಯತ್ತಿನಲ್ಲಿ ಭಾರತ ಆಹಾರ ಭದ್ರತೆ' ವಿಷಯ ಕುರಿತು ಮಾತನಾಡಿದರು.
ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಭಾರತ ಹಸಿವಿನ ರಾಜಧಾನಿಯಾಗುತ್ತಿದೆ. ಈ ವಿಷಯದಲ್ಲಿ ನಾವು ಆಫ್ರಿಕಾವನ್ನೂ ಹಿಂದೆ ಹಾಕಿದ್ದೇವೆ ಎಂದು ವಿಷಾದಿಸಿದರು. ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ವಿದರ್ಭದಲ್ಲಿ ಈ ಪ್ರಮಾಣ ಹೆಚ್ಚು ಎಂದರು.
ದೇಶದಲ್ಲಿ ಆಹಾರ ಭದ್ರತೆ ಸಾಧಿಸಬೇಕಾದರೆ, ಪರಿಸರ ಭದ್ರತೆ, ರೈತರಿಗೆ ಸಮರ್ಪಕ ನ್ಯಾಯ ಮತ್ತು ಆಹಾರ ಹೊಂದುವ ಹಕ್ಕು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಲ್ಲದೇ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಆಹಾರ ಭದ್ರತಾ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ಅವರು, ಈ ಕಾಯ್ದೆ ತೀರಾ ಅಪಾಯಕಾರಿ ಎಂದು ಹೇಳಿದರು.