ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಸುಭಾಷ್ ಭರಣಿ ಅವರು ಬಹುಜನ ಸಮಾಜ ಪಕ್ಷ (ಬಿಎಸ್ಪಿ)ಕ್ಕೆ ಮಂಗಳವಾರ ಅಧಿಕೃತವಾಗಿ ಸೇರ್ಪಡೆಗೊಂಡರು.
ಬಿಎಸ್ಪಿ ಅಧ್ಯಕ್ಷ ಮಾರಪ್ಪ ಮುನಿಯಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಸುಭಾಷ್ ಭರಣಿ ಇರುವ ಸ್ಥಾನಕ್ಕೆ ರಾಜೀನಾಮೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವುದಾಗಿ ಹೇಳಿದರು.
ಬಿಎಸ್‌ಪಿ ಸೇರ್ಪಡೆಗೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭರಣಿ, ಆಂತರಿಕ ತುಮುಲ ಹಾಗೂ ತಾಕಲಾಟದಿಂದ ಬೇಸತ್ತು ಬಿಜೆಪಿ ರಾಜೀನಾಮೆ ಸಲ್ಲಿಸಿ ಬಿಎಸ್‌ಪಿಗೆ ಸೇರುತ್ತಿರುವುದಾಗಿ ತಿಳಿಸಿದರು.
ಬಿಜೆಪಿಯಲ್ಲಿ ನನಗೆ ಯಾವುದೇ ವಿಷಾದವಿಲ್ಲ, ನನ್ನ ಮೇಲೆ ನನಗೆಯೇ ವಿಷಾದವಿದೆ ಎಂದವರು ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನದ ಸ್ಥಾನಮಾನ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿಯನ್ನು ಅಭಿನಂದಿಸುವುದಾಗಿ ಹೇಳಿದರು. ಬಿಜೆಪಿ ಸೇರಿದಕ್ಕೆ ವಿಷಾದವಿದೆ ಇದು ಅಂತಾರಾತ್ಮಕ್ಕೆ ಗೊತ್ತಾಗಿ ಮರಳಿ ನನ್ನ ಮನೆಗೆ ಸೇರುತ್ತಿರುವುದಾಗಿ ನುಡಿದರು.
ನಾನು ವಲಸಿಗನಲ್ಲ ಅಧಿಕಾರಕ್ಕಾಗಿ ಬಿಎಸ್ಪಿ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬಡಜನರ ಕಲ್ಯಾಣಕ್ಕಾಗಿ ದುಡಿಯುವುದಾಗಿ ಹೇಳಿದರು.