ವಿರೋಧ ಪಕ್ಷದ ನಾಯಕರು ಅಭಿವೃದ್ದಿ ವಿಷಯಗಳ ಕುರಿತು ಅಧಿಕಾರಿಗಳ ಸಭೆ ನಡೆಸುವ ಹಕ್ಕಿಲ್ಲ ಎಂಬ ಸುತ್ತೋಲೆ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ವಿಧಾನಸಭೆ ಕಲಾಪದಲ್ಲಿ ಸೋಮವಾರದಿಂದ ನಡೆಸುತ್ತಿದ್ದ ಧರಣಿಯನ್ನು ಮಂಗಳವಾರ ಹಿಂತೆಗೆದುಕೊಂಡಿವೆ.
ಈ ಕುರಿತು ಸದನದಲ್ಲಿ ಆಡಳಿತ ಪಕ್ಷಗಳು ಸುತ್ತೋಲೆ ಕ್ರಮಬದ್ಧವಾಗಿದ್ದು, ವಿರೋಧಪಕ್ಷಗಳು ಅಧಿಕಾರಿಗಳ ಸಭೆ ನಡೆಸಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸುತ್ತೋಲೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಉತ್ತರದಿಂದ ಅಸಮಾಧಾನಗೊಂಡಿದ್ದ ಪ್ರತಿಪಕ್ಷಗಳು ಧರಣಿ ಆರಂಭಿಸಿದ್ದವು.
ಇಂದು ಧರಣಿಯನ್ನು ಮುಂದುವರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರತಿಪಕ್ಷದ ಸದಸ್ಯರ ಹಕ್ಕುಗಳನ್ನು ಸರ್ಕಾರ ಮೊಟಕುಗೊಳಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
ಪ್ರತಿಪಕ್ಷ ನಾಯಕರು ಎಲ್ಲಿಯೂ ಪರಿಶೀಲನಾ ಸಭೆ ನಡೆಸಿಲ್ಲ. ಮಾಹಿತಿ ಪಡೆದಿದ್ದೇವೆ ಅಷ್ಟೆ. ಇದನ್ನೂ ಸರ್ಕಾರ ಮೊಟಕುಗೊಳಿಸುವ ಮೂಲಕ ನಮ್ಮ ಹಕ್ಕುಗಳಿಗೆ ಚ್ಯುತಿ ತಂದಿದೆ ಎಂದು ಅವರು ಗಂಭೀರವಾಗಿ ದೂರಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷಗಳು ಜನರ ಸಮಸ್ಯೆ ಕುರಿತು ಧರಣಿ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿ, ಯಾವ ರಾಜ್ಯದ ಮಹತ್ವದ ವಿಷಯ ಇಟ್ಟುಕೊಂಡು ಧರಣಿ ನಡೆಸುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ನಂತರ ಮಾತನಾಡಿದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಿಗೆ ನೀಡಿರುವ ಸೌಲಭ್ಯಗಳ ಕುರಿತು ಧರಣಿ ಮಾಡುತ್ತಿಲ್ಲ. ವಿರೋಧ ಪಕ್ಷಗಳಿಗೆ ನೀಡಿರುವ ಸವಲತ್ತು ವಾಪಸ್ ಪಡೆಯಿರಿ. ಆದರೆ ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಸಹಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ ಅವರು, ಬಳಿಕ ಧರಣಿಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ತಿಳಿಸಿ ತಮ್ಮ ಸದಸ್ಯರೆಲ್ಲರನ್ನು ಸ್ವಸ್ಥಾನಕ್ಕೆ ಕರೆದರು.