ರಾಷ್ಟ್ರದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ: ಇಸ್ಕಾನ್
ಡಿ.ಕೆ.ಶಿವಕುಮಾರ್ ಆರೋಪಕ್ಕೆ ಇಸ್ಕಾನ್ ತಿರುಗೇಟು...
ಬೆಂಗಳೂರು, ಬುಧವಾರ, 29 ಜುಲೈ 2009( 11:44 IST )
ಅಕ್ಷಯ ಪಾತ್ರೆ ಯೋಜನೆಯ ಕುರಿತು ಅವ್ಯವಹಾರದ ಆರೋಪ ಸಾಬೀತಾದಲ್ಲಿ ಯಾವ ಶಿಕ್ಷೆಗೂ ಸಿದ್ದ ಎಂದು ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಇಸ್ಕಾನ್ ಸಂಸ್ಥೆ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಅಕ್ಷಯ ಪಾತ್ರೆ ಯೋಜನೆಗೆ ಸರ್ಕಾರ ನೀಡುತ್ತಿರುವ ಹಣ ಸಾಲುತ್ತಿಲ್ಲ. ಹಾಗಾಗಿ ವಿದೇಶಿ ದೇಣಿಗೆ ಕಾಯ್ದೆಯಡಿ ಹಣ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ಯಾವುದೇ ರೀತಿ ಅವ್ಯವಹಾರ ನಡೆದಿಲ್ಲ ಎಂದರು.
ಆರೋಪ ಕುರಿತು ರಾಜ್ಯ ಸರ್ಕಾರ ಸದನ ಸಮಿತಿ ರಚಿಸುವುದಾಗಿ ಹೇಳಿರುವುದನ್ನು ಸ್ವಾಗತಿಸಿದ ಅವರು, ತನಿಖೆಗೆ ಸೂಕ್ತ ಸಹಕಾರ ನೀಡುವುದಾಗಿ ತಿಳಿಸಿದರು.
ಅಕ್ಷಯ ಪಾತ್ರೆ ಯೋಜನೆಯ ಪ್ರತಿ ಊಟಕ್ಕೆ ಸರ್ಕಾರ ನೀಡುವುದು 2.64ರೂ. ಆದರೆ ಒಂದು ಊಟ ತಯಾರಿಸಲು ತಗಲುವ ವೆಚ್ಚ ಸರಾಸರಿ 4.68ರೂ. ಹಾಗಿರುವಾಗ ಉಳಿದ ಹಣ ನಾವು ಎಲ್ಲಿಂದ ತರುವುದು. ವಿದೇಶಿ ದಾನಿಗಳು ತಾವಾಗಿಯೇ ಮುಂದೆ ಬಂದು ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಎಲ್ಲಿಯೂ ನಾವು ರಾಷ್ಟ್ರದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಇಸ್ಕಾನ್ ಸಂಸ್ಥೆಯ ಇಂಡಿಯಾ ಹೆರಿಟೇಜ್ ಟ್ರಸ್ಟ್ ಕೋಟ್ಯಂತರ ರೂಪಾಯಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದು ನಿಜ. ಆದರೆ ಅಕ್ಷಯ ಪಾತ್ರೆ ಹಾಗೂ ಹೆರಿಟೇಜ್ ಟ್ರಸ್ಟ್ ಎರಡೂ ಯೋಜನೆಗಳ ವ್ಯವಹಾರಗಳನ್ನು ಪ್ರತ್ಯೇಕಿಸಲಾಗಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಬಿಸಿಯೂಟ ಯೋಜನೆ ನಿಲ್ಲಿಸಲು ಸೂಚಿಸದರೆ ಇಂದೇ ನಿಲ್ಲಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕುಟುಂಬಗಳನ್ನು ತೊರೆದು ಸಮಾಜದ ಸೇವೆಗೆ ತೊಡಗಿಸಿಕೊಂಡ ನಮ್ಮ ವಿರುದ್ಧ ಯಾವುದೋ ದುರುದ್ದೇಶದಿಂದ ಆಧಾರರಹಿತ ಆರೋಪ ಮಾಡುವುದನ್ನು ನಮ್ಮ ಜನಪ್ರತಿನಿಧಿಗಳು ನಿಲ್ಲಿಸಬೇಕು ಎಂದು ಸಂಸ್ಥೆಯ ಉಪಾಧ್ಯಕ್ಷ ಚಂಚಲಪತಿ ದಾಸ್ ವಿನಂತಿಸಿಕೊಂಡರು.