ರಾಜ್ಯದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ರಾಜ್ಯ ಸರ್ಕಾರದ ಯೋಜನೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಉದ್ದೇಶಪೂರ್ವಕವಾಗಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತರ ಪ್ರತ್ಯೇಕಿರಣದ ಮೂಲಕ ಸರ್ಕಾರ ಅಶಾಂತಿ ಸೃಷ್ಟಿಗೆ ಮುಂದಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದೆ.
ಬಡ, ದಲಿತ, ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತರ ಆಹಾರದ ಮೇಲೆ ನಿಷೇಧ ಹೇರುವಂತ ಕೆಲಸ ಮಾಡುತ್ತಿದೆ. ಸಂಘ ಪರಿವಾರದ ನಿರ್ದೇಶನದಂತೆ ಸರ್ಕಾರ ಗೋ ಹತ್ಯೆ ನಿಷೇಧ ಕ್ರಮಕ್ಕೆ ಮುಂದಾಗಿದೆ. ಇಂತಹ ಕ್ರಮವನ್ನು ಡಿವೈಎಫ್‌ಐ ವಿರೋಧಿಸುವುದಾಗಿ ಎಚ್ಚರಿಸಿದೆ.
ಎಲ್ಲೆಡೆ ಜಾತಿ, ಅಸ್ಪೃಶ್ಯತೆ, ದೌರ್ಜನ್ಯ, ದಬ್ಬಾಳಿಕೆ ಸೇರಿದಂತೆ ಮಾನವ ಹತ್ಯೆಯನ್ನು ಖಂಡಿಸಲಾಗದ ಕೆಲವು ಸ್ವಾಮೀಜಿಗಳು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಬೇಕೆನ್ನುವುದರ ಹಿಂದೆ ಕೋಮುವಾದಿ ಕುತಂತ್ರ ಅಡಗಿದೆ ಎಂದು ಸಂಘಟನೆ ಹೇಳಿದೆ.
ಗೋ ಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಜನಾಂದೋಲನ ಪ್ರತಿಭಟನೆ ನಡೆಸಲಾಗುವುದು ಎಂದು ಭರತ್ ರಾಜ್ ತಿಳಿಸಿದ್ದಾರೆ.