ವಾಹನಗಳಿಗೆ ಹೈಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ಸ್ ಅಳವಡಿಕೆಯಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಜೆಡಿಎಸ್‌ನ ಎಚ್.ಡಿ. ರೇವಣ್ಣ ಅವರ ಆರೋಪದಿಂದ ಸಾರಿಗೆ ಸಚಿವ ಆರ್.ಅಶೋಕ್ ಭಾವೋದ್ವೇಗಕ್ಕೆ ಒಳಗಾಗಿ ಗದ್ಗದಿತರಾದ ಪ್ರಸಂಗ ಮಂಗಳವಾರ ವಿಧಾನಸಭೆ ಕಲಾಪದಲ್ಲಿ ನಡೆಯಿತು.
ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ ರೇವಣ್ಣ, ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದಾಗ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾದ ಸಾರಿಗೆ ಸಚಿವ ಆರ್. ಅಶೋಕ್ ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ತೀರ್ಮಾನವಾಗಿದೆ ಎಂದು ಹೇಳಿದರು.
ಈ ಹಿಂದೆ ಸಾರಿಗೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ 3 ಬಾರಿ ಪರಿಶೀಲಿಸಿ ಟೆಂಡರ್ ಕರೆಯಲು ಆದೇಶಿಸಿದರೆ, 2007ರಲ್ಲಿ ಸಾರಿಗೆ ಸಚಿವರಾಗಿದ್ದ ಚೆಲುವರಾಯಸ್ವಾಮಿ ಅವರು ಐದು ಬಾರಿ ಕಡತ ನೋಡಿ ಸಚಿವ ಸಂಪುಟದ ಮಂಡನೆಗೆ ಆದೇಶ ನೀಡಿದ್ದಾರೆ. ಆದರೆ ಆದಾದ ಕೂಡಲೆ ಸರ್ಕಾರ ಪತನಗೊಂಡು ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು. ಬಳಿಕ ಇದು ನ್ಯಾಯಾಲಯ ಮೆಟ್ಟಿಲು ಸಹ ಹತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾದ ಸಚಿವರ ಕಣ್ಣಂಚಲಿ ನೀರು ಬಂತು. ಈ ಸಂಬಂಧ ಎಲ್ಲಾ ಕಡತಗಳನ್ನು ಸಭಾಧ್ಯಕ್ಷರಿಗೆ ಸಲ್ಲಿಸಲಾಗುತ್ತದೆ. ಮುಖ್ಯಮಂತ್ರಿಗಳು ಪ್ರತಿಪಕ್ಷದ ನಾಯಕರು, ರೇವಣ್ಣ ಅವರು ಕುಳಿತು ನೋಡಲಿ, ನಮ್ಮ ಸರ್ಕಾರ ಏನಾದರೂ ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧವೆಂದು ಅವರು ಹೇಳಿದರು.
ಅಶೋಕ್ ಉತ್ತರ ನೀಡುತ್ತಿದ್ದಂತೆ ಬಿಜೆಪಿ ನಾಯಕರು ರೇವಣ್ಣರ ವಿರುದ್ಧ ತಿರುಗಿಬಿದ್ದರು. ರೇವಣ್ಣ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಆದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷರು ಮತ್ತೆ ಚರ್ಚೆಗೆ ಅವಕಾಶ ನೀಡದಿದ್ದಾಗ ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು.