ಮೈಸೂರಿನ ಕ್ಯಾತಮಾರನಹಳ್ಳಿ ಗಲಭೆ ಪ್ರಕರಣದಲ್ಲಿ 'ನನ್ನ ಕೈವಾಡ ಇಲ್ಲದಿದ್ದರೂ ಸಹ ಪೊಲೀಸರು ಕಟ್ಟುಕತೆ ಹೇಳಿ ಸುಳ್ಳು ದೂರು ದಾಖಲಿಸಿ ಬಂಧನಕ್ಕೊಳಪಡಿಸಿದ್ದಾರೆ' ಎಂದು ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಗಂಭೀರವಾಗಿ ಆರೋಪಿಸಿದ್ದಾರೆ.
ಪ್ರಚೋದನಾಕಾರಿ ಭಾಷಣ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮುತಾಲಿಕ್ ಅವರಿಗೆ ಮಂಗಳವಾರ ಮೈಸೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಬಳ್ಳಾರಿ ಜೈಲಿನಿಂದ ಬಿಡುಗಡೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಯಾತಮಾರನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನ ಜೊತೆ ಪೊಲೀಸ್ ಅಧಿಕಾರಿಗಳಿದ್ದರು, ಮಾಧ್ಯಮದವರಿದ್ದರು. ಆ ಸಂದರ್ಭದಲ್ಲಿ ನಾನು ಯಾವುದೇ ಪ್ರಚೋದನಾಕಾರಿ ಭಾಷಣ ಮಾಡಿಲ್ಲವಾಗಿತ್ತು. ಘಟನೆ ಕುರಿತಂತೆ ನಾನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಫ್ಯಾಕ್ಸ್ ಮೂಲಕ ವಿವರ ತಿಳಿಸಿದ್ದೆ ಎಂದು ಹೇಳಿದರು.
ಆದರೂ ಕೂಡ ನನ್ನ ಮೇಲೆ ಸುಳ್ಳು ಆಪಾದನೆ ಹಾಕಿ ಜೈಲಿಗಟ್ಟಿದ್ದರ ವಿರುದ್ಧ ಕಿಡಿಕಾರಿದ ಮುತಾಲಿಕ್, ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಹಿಂದುತ್ವದ ಹೆಸರಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಜನತಾ ಪಕ್ಷ, ಇದೀಗ ರಾಜ್ಯ ಬಿಜೆಪಿ ಸಿದ್ದಾಂತ ಮರೆತಿದೆ ಎಂದು ದೂರಿ, ಇದೇ ರೀತಿ ಮುಂದುವರಿದದ್ದೇ ಆದಲ್ಲಿ ಕೇಂದ್ರದಲ್ಲಿ ಆದ ಸ್ಥಿತಿಯೇ ರಾಜ್ಯ ಬಿಜೆಪಿಗೂ ಆಗಲಿದೆ ಎಂದು ಹೇಳಿದರು.