ಗೃಹ ಸಚಿವ ವಿ.ಎಸ್.ಆಚಾರ್ಯ ಅವರು ಮಂಡಿಸಿದ್ದ ಸಂಘಟಿತ ಅಪರಾಧಗಳ ನಿಯಂತ್ರಣ ತಿದ್ದುಪಡಿ ವಿಧೇಯಕ (ಕೋಕಾ)ಕ್ಕೆ ಬುಧವಾರ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.
ಸಂಘಟಿತ ಅಪರಾಧಗಳ ಕೂಟದ ಸದಸ್ಯರಾಗಿರಲಿ ಅಥವಾ ಇಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಯಗಳಲ್ಲಿ ಭಾಗಿಯಾಗಿದ್ದರೆ ಅಂತಹವರನ್ನು ಬಂಧಿಸಿ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದಾಗಿದೆ.
ಕೋಕಾ ಕಾಯ್ದೆಯಲ್ಲಿ ಬಂಧಿಸಲಾದ ಆರೋಪಿಯ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಂಡ ಅಥವಾ ಜಪ್ತಿ ಮಾಡಿದ 48ಗಂಟೆಯೊಳಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸತಕ್ಕದ್ದು, ಪ್ರಾಧಿಕಾರದ ಆದೇಶದಿಂದ ಬಾಧಿತನಾದ ವ್ಯಕ್ತಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದಾಗಿದೆ.
ಭಯೋತ್ಪಾದನೆ ಕೃತ್ಯವನ್ನು ವ್ಯವಸ್ಥಿತ ಅಪರಾಧ ಎಂಬುದಾಗಿ ಸೇರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯನ್ವಯ ಭಯೋತ್ಪಾದನೆ ಕೃತ್ಯ ಆರೋಪದ ವ್ಯಕ್ತಿಗೆ ಮರಣದಂಡನೆ ಅಥವಾ ಆಜೀವ ಕಾರಾಗೃಹವಾಸ ಮತ್ತು 10ಲಕ್ಷ ರೂಪಾಯಿ ದಂಡ ವಿಧಿಸುವುದು. ತನಿಖೆ ನಡೆಸುತ್ತಿರುವಾಗ ಆಪಾದಿತನ ಸ್ವತ್ತನ್ನು ಜಪ್ತಿ ಮಾಡುವುದು, ದೋಷಾರೋಪಣ ಪಟ್ಟಿಯನ್ನು ದಾಖಲು ಮಾಡುವ ಅವಧಿಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತ ದಂಡ ಸಂಹಿತೆ ಮತ್ತು ದಂಡ ಪ್ರಕ್ರಿಯೆ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡವು.