ಹಿಂದಿನ ಹಾಗೂ ಹಾಲಿ ಸರ್ಕಾರದಲ್ಲಿ ನಡೆದ ಹಗರಣಗಳ ಕುರಿತು ಚರ್ಚೆ ನಡೆಸಲು ವಿಶೇಷ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಹಗರಣವನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಸದನವನ್ನು ಮುಂದುವರಿಸದೆ ಮುಗಿಸಲಾಗುತ್ತದೆ ಎಂಬ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹಗರಣದ ಬಗ್ಗೆ ಚರ್ಚಿಸಲು 2 ದಿನ ವಿಶೇಷ ಅಧಿವೇಶನ ನಡೆಸಲಾಗುವುದು ಎಂದರು.
ಶಾಸಕಾಂಗ ಪಕ್ಷದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಿಮ್ಮ ಕಾಲದಿಂದ ಇಂದಿನವರೆಗೂ ಹಗರಣದ ಬಗ್ಗೆ ಚರ್ಚೆಯಾಗಲಿ, ಬೇರೆ ಯಾವುದೇ ಕಲಾಪ ಬೇಡ. ಸಭಾಧ್ಯಕ್ಷರು, ಸಭಾಪತಿ, ವಿರೋಧ ಪಕ್ಷದ ನಾಯಕರು ಸೇರಿ ಅಧಿವೇಶನದಲ್ಲಿಯೇ ದಿನಾಂಕ ನಿಗದಿಪಡಿಸೋಣ ಎಂದು ಹೇಳಿದರು.
ವಿಧಾನಸಭಾ ಉಪಚುನಾವಣೆ ಇರುವುದರಿಂದ ಅಧಿವೇಶನವನ್ನು ಮುಂದುವರಿಸುವುದು ಅಸಾಧ್ಯ ಎಂದು ತಿಳಿಸಿದ ಅವರು, ಮುಂದಿನ ವರ್ಷದಿಂದ 60 ದಿನಕ್ಕೂ ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಸಲು ಸಿದ್ಧ. ಮಾರ್ಚ್‌ನೊಳಗೆ ಸಾಧ್ಯವಾದಷ್ಟೂ ಹೆಚ್ಚು ದಿನ ಅಧಿವೇಶನ ನಡೆಸಲು ಸಿದ್ಧರಿದ್ದೇವೆ. ಕಾಯಿದೆ ಬಂದ ನಂತರವು 60 ದಿನ ಅಧಿವೇಶನ ನಡೆದಿಲ್ಲ ಎಂದು ತಿಳಿಸಿದ್ದಾರೆ.